ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದ ಪರಿಣಾಮ ವಿಧಾನಸಭೆಯಲ್ಲಿಂದು ಗದ್ದಲ, ಕೋಲಾಹಲ ಉಂಟಾಯಿತು.
ಪ್ರಶ್ನೋತ್ತರ ವೇಳೆ ಬಳಿಕ ಕಾಂಗ್ರೆಸ್ನ ಹಿರಿಯ ಸದಸ್ಯ ಹೆಚ್. ಕೆ. ಪಾಟೀಲ್, ಕೊರೊನಾ ಕುರಿತು ವಿಷಯ ಪ್ರಸ್ತಾಪಿಸಲು ಮುಂದಾದಾರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನೋಟಿಸ್ ನೀಡದೇ ಚರ್ಚೆಗೆ ಅವಕಾಶವಿಲ್ಲ ಎಂದರು. ನಿಯಮಗಳ ಪ್ರಕಾರ ಸದನ ನಡೆಸಬೇಕಾಗುತ್ತದೆ. ವಿಷಯದ ಗಂಭೀರತೆ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಶೂನ್ಯವೇಳೆಯಲ್ಲಿ ಹೇಳಬಹುದಿತ್ತು. ಸಂಬಂಧಪಟ್ಟ ಸಚಿವರು ಸದನದಲ್ಲಿ ಹೇಳಿಕೆ ನೀಡುವಾಗ ಕೇಳಿ ಎಂದು ಸಲಹೆ ನೀಡಿದರು.
ಆಗ ಕಾಂಗ್ರೆಸ್ ಹಿರಿ ಶಾಸಕ ಹೆಚ್. ಕೆ. ಪಾಟೀಲ್, 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಸದಸ್ಯರು ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಕೊರೊನಾ ವಿಚಾರ ಈಗಾಗಲೇ ಸದನದಲ್ಲಿ ಚರ್ಚೆಯಾಗಿದೆ. ಮತ್ತೆ ಅದರ ಪ್ರಸ್ತಾಪ ಬೇಡ. ಪ್ರತಿದಿನವೂ ಅದೇ ಚರ್ಚೆಯಾದರೆ ಹೇಗೆ? ಎಂದರು.
ಈ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದಿನಗೂಲಿ ನೌಕರರು, ಕ್ಯಾಬ್, ಆಟೋ ಚಾಲಕರು ಸೇರಿದಂತೆ ಜನರು ಸಮಸ್ಯೆಗೆ ಸಿಲುಕಿದಾಗ ಚರ್ಚೆ ಮಾಡಬೇಕು. ಇಡೀ ರಾಜ್ಯದಲ್ಲಿ ಕೋವಿಡ್-19 ಸೋಂಕು ಉಲ್ಬಣಿಸಿದ್ದು, ಜನ ತೊಂದರೆಯಲ್ಲಿದ್ದಾರೆ. 9 ಜಿಲ್ಲೆಗಳು ಲಾಕ್ ಡೌನ್ ಅಗಿವೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿ ಅದರ ಬಗ್ಗೆ ಚರ್ಚೆ ಮಾಡೋದು ಬೇಡ ಅಂದರೆ, ಬೇರೆಲ್ಲಿ ಮಾಡೋದು ಎಂದು ಪ್ರಶ್ನಿಸಿದರು.
ಆಗ ಸ್ಪೀಕರ್ ಈಗ ಚರ್ಚೆಗೆ ಅವಕಾಶವಿಲ್ಲ. ಮತ್ತೆ ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ. ಹಲವು ಕಠಿಣ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಕೊರೊನಾ ಕುರಿತು ಸದನದಲ್ಲಿ ಗಂಭೀರ ಚರ್ಚೆ ಆಗಲಿ. ಚರ್ಚೆಗೆ ನೊಟೀಸ್ ಕೊಡಿ ಅಂತ ಹೇಳಬಾರದು. ಜನ ಸಾಯುತ್ತಿದ್ದಾರೆ, ನೊಟೀಸ್ ಅಗತ್ಯವಿಲ್ಲ. ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಆಗ ಸ್ಪೀಕರ್ ನಿಯಮಾವಳಿ ಪ್ರಕಾರ ಸದನ ನಡೆಯಬೇಕು. ನೋಟಿಸ್ ನೀಡದೆ ನಾವು ಅವಕಾಶ ನೀಡಲು ಸಾಧ್ಯವಿಲ್ಲವೆಂದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನೀವು ಸ್ಪೀಕರ್ ಕಡಿಮೆ ಮಾತನಾಡಬೇಕು. ನಾವು ಮಾತನಾಡುವುದನ್ನು ಕೇಳಿ ನೀವು ಮಾತಾಡಬೇಕು. ಅತ್ಯಂತ ಗಂಭೀರ ವಿಷಯ, ನಿರ್ಲಕ್ಷ್ಯ ಮಾಡಬೇಡಿ ಎಂದರು. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸಚಿವರು ಹೇಳಿಕೆ ನೀಡಿದಾಗ ಕೇಳಿ ಎಂದು ಮುಂದಿನ ಕಾರ್ಯಕಲಾಪವನ್ನು ಕೈಗೆತ್ತಿಕೊಂಡರು.