ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 16ರಂದು ನಡೆಯಬೇಕಿದ್ದ ಆಲ್ ಇಂಡಿಯಾ ಬಾರ್ ಎಕ್ಸಾಮಿನೇಷನ್ ಅನ್ನು ಭಾರತೀಯ ವಕೀಲರ ಪರಿಷತ್ತು ಮುಂದೂಡಿದೆ.
ಭಾರತೀಯ ವಕೀಲರ ಪರಿಷತ್ತು ಜುಲೈ 29ರಂದು ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತುಗಳ ಪದಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಚರ್ಚಿಸಿ, ಈ ನಿರ್ಣಯ ಕೈಗೊಂಡಿದೆ. ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 16ರಂದು ನಡೆಸಬೇಕಿದ್ದ ಎಐಬಿಇ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಬಿಸಿಐ ತಿಳಿಸಿದೆ.
ಪರೀಕ್ಷೆಗೆ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದ್ದು, ಪರೀಕ್ಷೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಮೇಲ್ವಿಚಾರಣಾ ಸಮಿತಿ ನಿರ್ಧರಿಸಲಿದೆ. ನಂತರ ಪರೀಕ್ಷಾ ದಿನಾಂಕವನ್ನು ಎಐಬಿಇ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಬಿಸಿಐ ಹೇಳಿದೆ.
ವಕೀಲರು ಸ್ವತಂತ್ರವಾಗಿ ವೃತ್ತಿ ನಡೆಸಲು ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದ್ದು, ರಾಜ್ಯದಲ್ಲಿ ಪ್ರತಿವರ್ಷವೂ ಸಾವಿರಾರು ಕಾನೂನು ಪದವೀದರರು ಎಐಬಿಇ ಪರೀಕ್ಷೆ ತೆಗೆದುಕೊಳ್ಳುತ್ತಾರೆ.