ಬೆಂಗಳೂರು: ಇಂದು ರಾತ್ರಿಯಿಂದ 14 ದಿನಗಳ ಕೊರೊನಾ ಕರ್ಫ್ಯೂ ಹಿನ್ನೆಲೆ ಸಿಲಿಕಾನ್ ಸಿಟಿ ಜನರು ತಮ್ಮ ತಮ್ಮ ಊರಿಗೆ ಹೋಗಲು ಸಾಕಷ್ಟು ಸಂಖ್ಯೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಕಾಯುವ ದೃಶ್ಯಾವಳಿ ನಗರದಲ್ಲಿ ಕಂಡು ಬಂದಿತು.
ದೂರದೂರಿಗೆ ತೆರಳಲು ಕುಟುಂಬ ಸಮೇತ ಕೈಯಲ್ಲಿ ಬ್ಯಾಗ್ ಹಿಡಿದು ಏಕಾಏಕಿ ಬಸ್ ನಿಲ್ದಾಣಗಳಿಗೆ ಆಗಮಿಸಿದ್ದರಿಂದ ಜನಸಂದಣಿ ಉಂಟಾಯಿತು. ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ದಿನಗೂಲಿ ಕಾರ್ಮಿಕರು ಸೇರಿದಂತೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶ್ರಮಿಕ ವರ್ಗದ ಕಾರ್ಮಿಕರೇ ಹೆಚ್ಚಾಗಿ ಮೆಜೆಸ್ಟಿಕ್ ಸೇರಿದಂತೆ ನಗರದ ಹಲವು ಬಸ್ ನಿಲ್ದಾಣಗಳಲ್ಲಿ ಕಂಡುಬಂದರು.
ಮೈಸೂರು ರೋಡ್, ತುಮಕೂರು ರೋಡ್, ಬಳ್ಳಾರಿ ರೋಡ್, ಹೊಸೂರು ರೋಡ್ ಹಾಗೂ ಹಳೆ ಮದ್ರಾಸ್ ರೋಡ್ ಗಳಲ್ಲಿ ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿರುವ ದೃಶ್ಯಾವಳಿ ಕಂಡುಬಂದವು. ಅಲ್ಲದೇ ಹೆಚ್ಚಿನ ಜನದಟ್ಟಣೆಯಿಂದ ಕೆ.ಆರ್. ಮಾರ್ಕೆಟ್, ಮೈಸೂರು ರೋಡ್, ಮೆಜೆಸ್ಟಿಕ್, ಶಾಂತಿನಗರ, ಹೆಬ್ಬಾಳ, ಯಶವಂತಪುರ ಹಾಗೂ ಕೆ.ಆರ್.ಪುರ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಯಿತು.
"ಲಾಕ್ಡೌನ್ನಿಂದ ಮನೆ ಖಾಲಿ ಮಾಡಿ ಊರಿಗೆ ಹೋಗುತ್ತಿದ್ದೇವೆ. ಕೆಲಸ ಕಾರ್ಯವಿಲ್ಲ. ಇನ್ನೂ ನಗರದಲ್ಲಿದ್ದು ಕೊರೊನಾ ಸೋಂಕು ತಗುಲಿಸಿಕೊಳ್ಳುವುದಕ್ಕಿಂತ ಊರಿಗೆ ಹೋಗುವುದೇ ಲೇಸು." ಎಂಬ ಅಭಿಪ್ರಾಯ ಜನರಿಂದ ಕೇಳಿ ಬಂದವು.