ಬೆಂಗಳೂರು: ಪ್ರತಿಭಟನಾ ನಿರತ ಗುತ್ತಿಗೆ ವೈದ್ಯರ ಜೊತೆಗಿನ ಸಭೆ ಫಲಪ್ರದವಾಗಿದ್ದು, ಗುತ್ತಿಗೆ ವೈದ್ಯರು ತಮ್ಮ ಮುಷ್ಕರವನ್ನು ಕೈಬಿಡಲು ನಿರ್ಧರಿಸಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 507 ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಬಗ್ಗೆ ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ, ನಿಯಮಾವಳಿ ತಿದ್ದುಪಡಿಗೆ ಸಮ್ಮತಿ ಪಡೆಯಲು ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, 2017ರಿಂದ ಗುತ್ತಿಗೆ ಆಧಾರದ ಮೇಲಿನ ವೈದ್ಯರನ್ನು ಖಾಯಂ ಮಾಡಬೇಕು ಅಂತ ಒತ್ತಾಯ ಇತ್ತು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿತ್ತು. ಈ ಹಿಂದೆ ಅವರಿಗೆ ಇದ್ದ 45 ಸಾವಿರ ರೂ. ಸಂಬಳವನ್ನು 60 ಸಾವಿರಕ್ಕೆ ಏರಿಕೆ ಮಾಡಿದ್ದೇವೆ. ಗುತ್ತಿಗೆ ಆಧಾರದ ಈ ಎಲ್ಲ 507 ವೈದ್ಯರೂ ಸಹ ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಮುಷ್ಕರ ಮಾಡುವುದು ಸರಿಯಲ್ಲ ಎಂದರು.
ಇವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದೇವೆ. ನೇಮಕಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ನಿರ್ಧರಿಸಿದ್ದೇವೆ. ಮುಷ್ಕರ ಕೈ ಬಿಡುವಂತೆ ಮನವಿ ಮಾಡಿದ್ದೇವೆ. ಸದ್ಯ 1700 ವೈದ್ಯರ ಹುದ್ದೆಗಳು ಖಾಲಿ ಇವೆ. ಈ ಪೈಕಿ 500 ಹುದ್ದೆಗೆ ಅರ್ಜಿ ಆಹ್ವಾನಿಸಿದ್ದೇವೆ. ಉಳಿದವರನ್ನು ನೇರ ನೇಮಕ ಮಾಡುತ್ತೇವೆ ಎಂದು ಇದೇ ವೇಳೆ ಶ್ರೀರಾಮುಲು ತಿಳಿಸಿದರು.
ಮಾತುಕತೆ ಫಲಪ್ರದವಾಗಿದೆ: ಇದೇ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಈ ಹಿಂದಿನ ಎರಡು ಸರ್ಕಾರಗಳಿಂದಲೂ ಇವರ ಬೇಡಿಕೆ ಈಡೇರಿರಲಿಲ್ಲ. ಇಂದು ನಡೆದ ಸಭೆ ಫಲಪ್ರದವಾಗಿದೆ ಎಂದು ತಿಳಿಸಿದರು. ಸಿಎಂ ಸೂಚನೆ ಮೇರೆಗೆ ಗುತ್ತಿಗೆ ಆಧಾರಿತ ವೈದ್ಯರ ಜೊತೆ ಸಭೆ ನಡೆಸಿ, ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಿಯಮಾವಳಿ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅವರ ಇತರ ಬೇಡಿಕೆಗಳಿಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ಭರವಸೆ ನೀಡಿದ್ದೇವೆ. ವೈದ್ಯರ ಸಂಘ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು.
ಮುಷ್ಕರ ನಿರ್ಧಾರ ಕೈಬಿಡುತ್ತೇವೆ
ಇದೇ ವೇಳೆ ಮಾತನಾಡಿದ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ನಾಳೆ ಮುಷ್ಕರ ವಾಪಸ್ ಪಡೆದು ವೈದ್ಯರು ಕೆಲಸಕ್ಕೆ ಹಾಜರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನಾಳೆಯಿಂದ ವೈದ್ಯರು ಕೆಲಸಕ್ಕೆ ವಾಪಸಾಗಲಿದ್ದಾರೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮುಷ್ಕರ ಮಾಡಿದ್ದಕ್ಕೆ ವಿಷಾದ ಇದೆ. ಖಾಯಂಮಾತಿ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಸಮ್ಮತಿಸಿದೆ. ಗುತ್ತಿಗೆ ವೈದ್ಯರಿಗೆ ಅಂಕವನ್ನು ನೀಡುವ ಮೂಲಕ ವೈಟೇಜ್ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ ವೇತನ ಹೆಚ್ಚಳ ಮಾಡುವ ಸಂಬಂಧವೂ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದು ವಿವರಿಸಿದರು.