ಬೆಂಗಳೂರು: ಮದುವೆ ಸಮಾರಂಭಕ್ಕಾಗಿ ಮುಂಗಡವಾಗಿ ಕಲ್ಯಾಣ ಮಂಟಪ ಕಾಯ್ದಿರಿಸಿ ಕೋವಿಡ್ ಕಾರಣಕ್ಕಾಗಿ ಕಲ್ಯಾಣ ಮಂಟಪ ಬಳಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಶೇ.10ಕ್ಕಿಂತ ಹೆಚ್ಚು ಮೊತ್ತ ಪಡೆದುಕೊಳ್ಳುವುದು ನಿಯಮ ಬಾಹಿರ ಎಂದು ನಗರದ ಗ್ರಾಹಕ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲ್ಯಾಣ ಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಹಣ ಪಾವತಿಸಿರುತ್ತಾರೆ. ಆದರೆ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹಲವು ನಿರ್ಬಂಧ ವಿಧಿಸಿದ ಬಳಿಕ ಕಾರ್ಯಕ್ರಮ ರದ್ದಾಗಿರುತ್ತದೆ. ಈ ಸಂದರ್ಭದಲ್ಲಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ಪಾವತಿಸದೇ ಇದ್ದಲ್ಲಿ ಶೇ.10ರಷ್ಟು ಮಾತ್ರ ಪಡೆದುಕೊಳ್ಳಬಹುದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಬೆಂಗಳೂರು ನಗರದ ಮಾಗಡಿ ರಸ್ತೆ ನಿವಾಸಿ ಎನ್.ಚಂದ್ರಶೇಖರ್ ಎಂಬುವರು ತಮ್ಮ ಪುತ್ರನ ವಿವಾಹವನ್ನು 2020ರ ಏಪ್ರಿಲ್ ತಿಂಗಳಲ್ಲಿ ನಿಶ್ಚಯಿಸಿದ್ದರು. ಅದಕ್ಕಾಗಿ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ವೆಂಕಟೇಶ್ವರ ಸೇವಾ ಟ್ರಸ್ಟ್‌ನ ಕಲ್ಯಾಣ ಮಂಟಪ ಕಾಯ್ದಿರಿಸಿ 1.47 ಲಕ್ಷ ರೂ. ಪಾವತಿಸಿದ್ದರು. ಆದರೆ, ಕೋವಿಡ್ನಿಂದಾಗಿ ಮದುವೆ ಮುಂದೂಡಿದ್ದರಿಂದ ಮುಂಗಡವಾಗಿ ಪಾವತಿಸಿದ್ದ ಹಣ ಹಿಂದಿರುಗಿಸಲು ಕೋರಿದ್ದರು.
ಈ ವೇಳೆ ಕಲ್ಯಾಣ ಮಂಟಪದ ಮಾಲಿಕರು 1.25 ಲಕ್ಷ ರೂ. ಹಿಂದಿರುಗಿಸಿ, ಉಳಿದ ಶೇ.18ರಷ್ಟು ಮೊತ್ತವಾದ 22,000 ರೂಪಾಯಿಯನ್ನು ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಪಾವತಿಸಿರುವುದಾಗಿ ತಿಳಿಸಿದ್ದರು. ಇದನ್ನು ಒಪ್ಪದ ದೂರುದಾರರು ಕಲ್ಯಾಣ ಮಂಟಪ ಬಳಕೆ ಮಾಡಿಲ್ಲ. ಹೀಗಾಗಿ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಹಣ ಬಾರದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಕಲ್ಯಾಣ ಮಂಟಪದ ಮಾಲೀಕರ ಪರ ವಕೀಲರು ವಾದ ಮಂಡಿಸಿ, ಸಮಾರಂಭಕ್ಕೆ ನಿಗದಿ ಮಾಡಿದ ದಿನಕ್ಕಿಂತ 150 ದಿನಕ್ಕೆ ಮೊದಲೇ ತಮ್ಮ ಬುಕ್ಕಿಂಗ್ ರದ್ದು ಮಾಡಿದರೆ ಶೇ.10ರಷ್ಟನ್ನು ಕಡಿತ ಮಾಡಿಕೊಂಡು ಉಳಿದ ಹಣ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ, 150 ದಿನಗಳ ಒಳಗೆ ಬುಕ್ಕಿಂಗ್ ರದ್ದು ಮಾಡಿದರೆ ಯಾವುದೇ ಮುಂಗಡ ಹಣ ಹಿಂದಿರುಗಿಸುವುದಿಲ್ಲ. ಹಾಗೂ ಅದೇ ದಿನಕ್ಕೆ ಬೇರೆ ಯಾರಾದರೂ ಬುಕ್ಕಿಂಗ್ ಮಾಡಿದರೆ ಮಾತ್ರ ಶೇ. 10ರಷ್ಟು ಹಣ ಕಡಿತ ಮಾಡಿಕೊಂಡು ಉಳಿದದ್ದನ್ನು ಹಿಂದಿರುಗಿಸುತ್ತೇವೆ. ದೂರುದಾರರು 150 ದಿನಗಳ ಒಳಗೆ ಬುಕ್ಕಿಂಗ್ ರದ್ದು ಮಾಡಿರುವುದರಿಂದ ಶೇ. 18ರಷ್ಟು ಜಿಎಸ್ಟಿ ತೆರಿಗೆ ಕಡಿತ ಮಾಡಿ ಉಳಿದ ಹಣ ಹಿಂದಿರುಗಿಸಿದ್ದೇವೆ ಎಂದು ವಾದಿಸಿದ್ದರು.
ವಾದ - ಪ್ರತಿವಾದ ಆಲಿಸಿದ ಕೆ.ಎಸ್ ಬೀಳಗಿ ಹಾಗೂ ರೇಣುಕಾದೇವಿ ದೇಶಪಾಂಡೆ ಅವರಿದ್ದ ಪೀಠ, ಕಲ್ಯಾಣ ಮಂಟಪ ಮಾಲೀಕರು 22 ಸಾವಿರ ರೂ. ಜಿಎಸ್‌ಟಿಗೆ ಕಡಿತ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಜಿಎಸ್ಟಿ ಪಾವತಿಸಿರುವ ಸಂಬಂಧ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಶೇ.18ರಷ್ಟು ಮೊತ್ತ ಕಡಿತ ಮಾಡಿರುವುದು ನಿಯಮ ಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಪದವಿ ಹಂತದಲ್ಲಿ ಕನ್ನಡ ಕಡ್ಡಾಯ: ಸರ್ಕಾರದ ಆದೇಶ ಮರುಪರಿಶೀಲಿಸಲು ಸೂಚಿಸುತ್ತೇವೆ ಎಂದ ಹೈಕೋರ್ಟ್
ಅಲ್ಲದೇ ಕೋವಿಡ್ ಕಾರಣಕ್ಕಾಗಿ ಬಹುತೇಕ ಕಾರ್ಯಕ್ರಮಗಳು ರದ್ದಾಗಿವೆ. ಆದ್ದರಿಂದ, ಕಲ್ಯಾಣ ಮಂಟಪದ ಮಾಲಿಕರು ಶೇ.10 ರಷ್ಟು ಹಣ ಮಾತ್ರ ಕಡಿತ ಮಾಡಿಕೊಂಡು ಉಳಿದ 7,700 ರೂ. ಹಿಂದಿರುಗಿಸಬೇಕು. ಹಾಗೆಯೇ, ಅರ್ಜಿದಾರರಿಗೆ 2 ಸಾವಿರ ರೂ. ಪರಿಹಾರವಾಗಿ ನೀಡಬೇಕು ಮತ್ತು 1 ಸಾವಿರ ರೂ. ಕಾನೂನು ಹೋರಾಟದ ವೆಚ್ಚವಾಗಿ ಮುಂದಿನ 30 ದಿನಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.