ಬೆಂಗಳೂರು: ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಿಡಿಎಗೆ ಭೂಮಿ ನೀಡುವುದಿಲ್ಲ ಎಂದು ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಸಂಧಾನ ಸಭೆ ನಡೆಸಿದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕೋರ್ಟ್ನಿಂದ ಪ್ರಕರಣಗಳನ್ನು ಹಿಂಪಡೆಯಲು ರೈತರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.
ಓದಿ: ನಿರ್ಲಕ್ಷ್ಯ ವಹಿಸುತ್ತಿರುವ ಡಿಸಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ!
ಇನ್ನು ರೈತರ 11 ಪ್ರಮುಖ ಬೇಡಿಕೆಗಳ ಪೈಕಿ ಬಹುತೇಕ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಭರವಸೆಯನ್ನು ನೀಡಿದರು. ನಾಡಪ್ರಭು ಕೆಂಪೇಗೌಡ ಬಡಾವಣೆ ಹೋರಾಟ ಸಮಿತಿಯ ಅಧ್ಯಕ್ಷ ಚನ್ನಪ್ಪ ನೇತೃತ್ವದಲ್ಲಿ 50ಕ್ಕೂ ಹೆಚ್ಚು ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡಿದ್ದರೂ ಕರಾರಿನಂತೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನಾಗಲಿ ಅಥವಾ ನಗದು ರೂಪದ ಪರಿಹಾರವನ್ನಾಗಲಿ ಅಧಿಕಾರಿಗಳು ನೀಡಿಲ್ಲ. ಇತ್ತ ತಮ್ಮ ಜಮೀನಿನಲ್ಲಿ ಬೆಳೆಯೂ ಇಲ್ಲದೆ, ಪರಿಹಾರವೂ ಸಿಗದೆ ರೈತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎಂದು ದೂರಿದರು.
ವಂಶಪಾರಂಪರ್ಯದಿಂದ ಬಂದಿರುವ ಭೂಮಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದರೂ, ಒದಗಿಸಲು ಸಾಧ್ಯವಾಗದಂತಹ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಪಿಆರ್ಆರ್ ರಸ್ತೆಗೆ ಭೂಮಿಯನ್ನು ನೀಡಿದ್ದರೂ ಪರಿಹಾರ ನೀಡಿಲ್ಲ. ಭೂಮಿಯನ್ನು ನೀಡಿರುವ ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗವನ್ನು ಮೀಸಲಿಡುವುದು, ಸಂಪರ್ಕ ರಸ್ತೆಗಳನ್ನು ನಿರ್ಮಿಸುವುದು, ಗ್ರಾಮಗಳ ಅಭಿವೃದ್ಧಿಗೆ ಕ್ರಮ ವಹಿಸುವುದು. ರೆವಿನ್ಯೂ ನಿವೇಶನಗಳ ಬಗ್ಗೆ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಸೇರಿದಂತೆ ಇನ್ನಿತರೆ 11 ಬೇಡಿಕೆಗಳನ್ನು ರೈತರು ಸಭೆಯ ಮುಂದಿಟ್ಟರು.
ಬಳಿಕ ವಿಶ್ವನಾಥ್, ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಸಭೆಯ ನಂತರ ಮಾತನಾಡಿದ ಅವರು, ಕೆಲವು ಅಧಿಕಾರಿಗಳ ಅಸಡ್ಡೆಯಿಂದ ರೈತರಿಗೆ ಕಳೆದ 9-10 ವರ್ಷಗಳಿಂದ ಬಿಡಿಎಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ಹೇಳಿದರು. ರೈತರಿಗೆ ಪರಿಹಾರ ನೀಡುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು 15 ದಿನದಿಂದ ಒಂದು ತಿಂಗಳೊಳಗೆ ಇತ್ಯರ್ಥಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ರೆವಿನ್ಯೂ ನಿವೇಶನಗಳಿಗೆ ಸಂಬಂಧಿಸಿದಂತೆ ರೈತರ ಭೂಮಿಯ ನೈಜತೆಯನ್ನು ಒಂದು ವಾರದೊಳಗೆ ಪರಿಶೀಲಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ಈ ಸಮಸ್ಯೆಯೂ ತ್ವರಿತವಾಗಿ ಬಗೆಹರಿಯಲಿದೆ ಎಂದರು. ರೈತರು ಬಡಾವಣೆ ನಿರ್ಮಾಣಕ್ಕೆಂದು ತಮ್ಮ ಕೃಷಿ ಭೂಮಿಯನ್ನು ನೀಡಿದ್ದಾರೆ. ಇಂತಹ ರೈತರಿಗೆ ಅವರದೇ ಭೂಮಿಯಲ್ಲಿ ಲಭ್ಯವಿದ್ದರೆ ಅವರ ಪಾಲಿನ ಪರಿಹಾರ ರೂಪದ ಅಭಿವೃದ್ಧಿಪಡಿಸಿದ ನಿವೇಶನವನ್ನು ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಆ ನಿರ್ದಿಷ್ಟ ಜಾಗದಲ್ಲಿ ಇತರರಿಗೆ ನಿವೇಶನವನ್ನು ಹಂಚಿಕೆ ಮಾಡಿದ್ದರೆ ಹತ್ತಿರದಲ್ಲೇ ಇರುವ ಜಾಗದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.