ಬೆಂಗಳೂರು: ಇಂಧನ ಬೆಲೆ ಏರಿಕೆ ಖಂಡಿಸಿ ನಾಳೆ ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮತ್ತು ಬಿಜೆಪಿ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಬ್ಯಾಟರಾಯನಪುರದಿಂದ ಯಲಹಂಕ ತಾಲ್ಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಯಲಿದೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಕೃಷ್ಣ ಬೈರೇಗೌಡ, ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿಗೆ ಮಾರಕವಾದ ಕಾನೂನು ವಿರುದ್ಧ ಹಾಗೂ ತಮ್ಮ ಉಳಿವಿಗಾಗಿ ಹೋರಾಟ ನಡೆಸಿರುವ ರೈತರಲ್ಲಿ 206 ಮಂದಿ ಹುತಾತ್ಮರಾದರೂ ಸಹ ಎದೆಗುಂದದೆ ಹೋರಾಟ ಮುಂದುವರಿಸಿದ್ದಾರೆ. ಇನ್ನೊಂದೆಡೆ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಯನ್ನು ಗಣನೀಯವಾಗಿ ಏರಿಕೆ ಮಾಡಿದೆ. ಯದ್ವಾತದ್ವಾ ತೆರಿಗೆಯನ್ನು ಏರಿಸಿ ಜನರಿಗೆ ಸಂಕಷ್ಟ ಉಂಟುಮಾಡಿವೆ.
ಬಡವರ ಹಣ ಸುಲಿಗೆ ಮಾಡುವ ರೀತಿ ಇಂಧನ ಬೆಲೆ ಏರಿಕೆ ಮಾಡಿವೆ. ಕೇಂದ್ರ ಸರ್ಕಾರದ ಈ ನಿಲುವು ಖಂಡಿಸಿ ಬೆಲೆ ಇಳಿಕೆಗೆ ಆಗ್ರಹಿಸಿ ಬ್ಯಾಟರಾಯನಪುರ ಕಾಂಗ್ರೆಸ್ ಈ ಮಹತ್ವದ ಪ್ರತಿಭಟನೆ ಹಮ್ಮಿಕೊಂಡಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.