ಬೆಂಗಳೂರು: ಟಿವಿ, ಫ್ರಿಡ್ಜ್ ಇರುವವರಿಗೆ ಪಡಿತರ ರದ್ದುಗೊಳಿಸಬೇಕೆಂಬ ವಿಚಾರಕ್ಕೆ ಸಚಿವ ಉಮೇಶ್ ಕತ್ತಿ ವಿರುದ್ಧ ಯುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಟಿವಿ, ರೆಫ್ರಿಜರೇಟರ್ ಇರುವವರಿಗೆ ಪಡಿತರ ರದ್ದು ವಿಚಾರವಾಗಿ ಸಚಿವ ಉಮೇಶ್ ಕತ್ತಿ ನೀಡಿದ್ದ ಹೇಳಿಕೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಕರ್ತರು ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉಮೇಶ್ ಕತ್ತಿ ರಾಜೀನಾಮೆ ನೀಡಬೇಕೆಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಲಾಯಿತು. ಸಚಿವ ಕತ್ತಿ ಭಾವಚಿತ್ರಕ್ಕೆ ಭಾವಚಿತ್ರಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಬಿಜೆಪಿ ಸಚಿವರಿಗೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೊರೊನಾ ಹೆಸರಲ್ಲಿ ಬಡವರ ಹಣ ಲೂಟಿ ಮಾಡಿದ್ದಾರೆ. ಅಧಿಕಾರಕ್ಕಾಗಿ ಹಣದ ಆಮಿಷವೊಡ್ಡಿ ಬಲವಂತವಾಗಿ ಸಚಿವರಾದವರು. ಪ್ರತಿಯೊಂದು ಮನೆಯಲ್ಲಿ ಇವತ್ತು ದ್ವಿಚಕ್ರ ವಾಹನ ಇರುತ್ತೆ. ತಳ್ಳುವ ಗಾಡಿ ಇರುವವರ ಮನೆಯಲ್ಲೂ ಕೂಡ ಇವತ್ತು ಟಿವಿ ಇರುತ್ತೆ. ಉಮೇಶ್ ಕತ್ತಿ ಕೊಡಲ್ಲ ಅಂತ ಹೇಳುವುದಕ್ಕೆ ಅವರೇನು ತಮ್ಮ ಮನೆಯಿಂದ ತಂದ್ ಕೊಡುತ್ತಾರಾ? ಯಡಿಯೂರಪ್ಪ ಮನೆಯಿಂದ ಏನಾದ್ರು ತಂದ್ ಕೊಡ್ತಾರಾ ಅಥವಾ ನರೇಂದ್ರ ಮೋದಿ ಅವರ ಖಾತೆಯಿಂದ ಕೊಡ್ತಾರಾ? ಎಂದು ಪ್ರಶ್ನಿಸಿದರು. ಕತ್ತಿ ಬಡವರ ವಿರೋಧಿ ಸಚಿವ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಇಂತ ಅನಾಗರಿಕ ಸಚಿವ ಬೇಕಾಗಿಲ್ಲ, ಕರ್ನಾಟಕಕ್ಕೆ ಬೇಕಿಲ್ಲ. ಯಡಿಯೂರಪ್ಪ ಅವರು ಉಮೇಶ್ ಕತ್ತಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸಾಮಾನ್ಯ ಜನರಿಗೆ ಬಿಗ್ ಶಾಕ್.. ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು!