ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಹಿನ್ನೆಲೆ ಮನೆಯಲ್ಲಿಯೇ ಪೂಜೆ ನೆರವೇರಿಸಿದ ಡಿಕೆ ಶಿವಕುಮಾರ್, ಯಾವ ದೇವಾಲಯಕ್ಕೂ ಹೋಗ್ತಿಲ್ಲ, ತಿಹಾರ್ ಜೈಲಿನಿಂದ ಬಂದ ತಕ್ಷಣ ಹೋಗಿದ್ದು ಕಾಂಗ್ರೆಸ್ ಕಚೇರಿ ಎಂಬ ದೇವಾಲಯಕ್ಕೆ ಎಂದು ಹೇಳಿದರು.
ಗಾಳಿ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಡಿಕೆ ಶಿವಕುಮಾರ್ ಹೆಸರಿನಲ್ಲಿ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬಳಿಕ ಅದರ ಪ್ರಸಾದವನ್ನು ಗಾಳಿ ಆಂಜನೇಯ ದೇವಾಲಯದ ಪುರೋಹಿತರು ಡಿಕೆಶಿ ಮನೆಗೆ ಕೊಟ್ಟು, ಪದಗ್ರಹಣ ಸಮಾರಂಭ ಮುಗಿದ ಬಳಿಕ ದೇವಸ್ಥಾನಕ್ಕೆ ಬನ್ನಿ ಎಂದು ತಿಳಿಸಿದ್ದಾರೆ.
ಈ ವೇಳೆ, ಮಾಧ್ಯಮದವರ ಜೊತೆ ಮಾತನಾಡಿದ ಡಿಕೆಶಿ, ನಮ್ಮದು ಐಕ್ಯತೆ ಮಂತ್ರ, ನ್ಯಾಯ ನಿಷ್ಠೆಯಿಂದ ರಾಜ್ಯವನ್ನ ಕಾಪಾಡಬೇಕು. ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಹಿರಿಯರು ಉಳಿಸಿದ್ದು, ಅದನ್ನ ರಾಜ್ಯದಲ್ಲಿ ನಾನು ಉಳಿಸಿ ಬೆಳೆಸುತ್ತೇನೆ. ಹಾಗೆ ಜನರ ಭಾವನೆ ಅರಿತುಕೊಂಡು ಜನರ ಧ್ವನಿಯನ್ನು ಸರ್ಕಾರಕ್ಕೆ ತಿಳಿಸುವ ಕೆಲಸ ನಾವೆಲ್ಲ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇಂದು ನಮ್ಮ ಧ್ವಜ ತೆಗೆದುಕೊಂಡ ನಂತರ ನನ್ನ ಸವಾಲು ಏನು ಅಂತ ತಿಳಿಸುತ್ತೇನೆ. ಸಂವಿಧಾನ ಅಳಿಸಲು ಕೆಲ ಪಕ್ಷದ ಮುಖಂಡರು ಹೊರಟಿದ್ದಾರೆ. ಇದನ್ನ ಉಳಿಸುವ ಕೆಲಸ ನಾವೆಲ್ಲ ಮಾಡಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ ಎಂದರು.