ಬೆಂಗಳೂರು : ರಾಜ್ಯ ವಿಧಾನ ಪರಿಷತ್ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಒಟ್ಟು 11 ಸದಸ್ಯರ ಅವಧಿ ಬರುವ ಜೂನ್ ವೇಳೆಗೆ ಮುಕ್ತಾಯವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸದಸ್ಯ ಬಲ ಕಡಿಮೆ ಆಗುವ ಆತಂಕ ಶುರುವಾಗಿದೆ. ಶಿಕ್ಷಕ, ಪದವೀಧರ ಕ್ಷೇತ್ರಗಳ ನಾಲ್ಕು ಹಾಗೂ ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆ ಆಗಿರುವ ಏಳು ಸದಸ್ಯರ ಅವಧಿ ಜೂನ್ ವೇಳೆಗೆ ಮುಕ್ತಾಯವಾಗಲಿದೆ.
ಶಿಕ್ಷಕ, ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆ ಆಗುವುದಿಲ್ಲ. ಬದಲಾಗಿ ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಾಗಿರುವ ನಾಲ್ವರ ಸ್ಥಾನ ತೆರವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುವುದು ಇಬ್ಬರನ್ನು ಮಾತ್ರ. ಇಲ್ಲಾಗುವ ಕೊರತೆಯನ್ನು ಶಿಕ್ಷಕ, ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಗೆದ್ದುಕೊಳ್ಳಬೇಕಿದೆ. ಆದರೆ, ಇಲ್ಲಿ ತಲಾ ಎರಡು ಸ್ಥಾನಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಹೊಂದಿವೆ. ಬಿಜೆಪಿಯಿಂದ ವಾಯವ್ಯ ಶಿಕ್ಷಕರ ಕ್ಷೇತ್ರ -ಅರುಣ್ ಶಹಾಪುರ್ ಹಾಗೂ ವಾಯವ್ಯ ಪದವೀಧರ ಕ್ಷೇತ್ರ -ಹನುಮಂತ ನಿರಾಣಿ ಅವರೇ ಕಣಕ್ಕಿಳಿದಿದ್ದಾರೆ.
ಇನ್ನೊಂದೆಡೆ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿನಿಧಿಸುವ ಪಶ್ಚಿಮ ಪದವೀಧರ ಕ್ಷೇತ್ರದಿಂದ ಅವರೇ ನಿಲ್ಲುವ ಸಾಧ್ಯತೆ ಇದೆ. ಆದ್ರೆ, ಜೆಡಿಎಸ್ ಅಥವಾ ಬಿಜೆಪಿ ಎನ್ನುವುದು ನಿರ್ಧಾರ ಆಗಬೇಕಿದೆ. ಇನ್ನೊಂದೆಡೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಗೆದ್ದಿರುವ ಶ್ರೀಕಂಠೇಗೌಡರು ಕಣಕ್ಕಿಳಿಯುತ್ತಿಲ್ಲ. ಅವರ ಬದಲು ರಾಮು ಎಂಬುವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷ ದಕ್ಷಿಣ ಪದವೀಧರ ಕ್ಷೇತ್ರದಿಂದ ಮಾಜಿ ಸಂಸದ ಮಾದೇಗೌಡರ ಪುತ್ರ ಮಧು ಜಿ. ಮಾದೇಗೌಡರಿಗೆ ಟಿಕೆಟ್ ನೀಡಿದ್ದು, ಗೆಲುವಿನ ದೊಡ್ಡ ನಿರೀಕ್ಷೆ ಹೊಂದಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಸವರಾಜ ಗುರಿಕಾರಗೆ ಟಿಕೆಟ್ ನೀಡಲಾಗಿದೆ. ಇವರು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಉಳಿದೆರಡು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಆಗಬೇಕಿದೆ.
ಬಿಜೆಪಿ ಸಂಖ್ಯಾಬಲ ಏರುವ ಸಾಧ್ಯತೆ : ಬಿಜೆಪಿ ತಾನು ಹೊಂದಿರುವ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಇದರ ಜೊತೆ ಬಸವರಾಜ ಹೊರಟ್ಟಿಯವರನ್ನು ಸೆಳೆಯುವ ಸಿದ್ಧತೆ ನಡೆಸಿದೆ. ಈ ಮೂಲಕ ನಾಲ್ಕರಲ್ಲಿ ಮೂರು ಕ್ಷೇತ್ರ ಬಾಚಿಕೊಳ್ಳುವುದು ಇವರ ಉದ್ದೇಶ. ಇದರಲ್ಲಿ ಸಫಲವಾದರೆ ಬಿಜೆಪಿ ಸಂಖ್ಯಾಬಲ 38ರಿಂದ ಮೇಲಕ್ಕೇರಲಿದೆ.
ಕಾಂಗ್ರೆಸ್ ಆತಂಕ : ಈಗಾಗಲೇ ಐದಾರು ಹಿರಿಯ ಸದಸ್ಯರನ್ನು ಮೇಲ್ಮನೆಯಲ್ಲಿ ಕಳೆದುಕೊಂಡು ಬಡವಾಗಿರುವ ಕಾಂಗ್ರೆಸ್ಗೆ ಮತ್ತಷ್ಟು ಹಿರಿಯರ ಅವಧಿ ಮುಕ್ತಾಯವಾಗುತ್ತಿರುವುದು ಸಹಜವಾಗಿ ಆತಂಕ ತರಿಸಿದೆ. 2016ರ ಜೂನ್ನಲ್ಲಿ ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಾಗಿದ್ದ ಅಲ್ಲಂ ವೀರಭದ್ರಪ್ಪ, ಆರ್.ಬಿ. ತಿಮ್ಮಾಪೂರ್, ವೀಣಾ ಅಚ್ಚಯ್ಯ ಹಾಗೂ ಯು.ಬಿ. ವೆಂಕಟೇಶ್ (ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಷದ್ ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆ ತೆರವಾಗಿದ್ದ ಕ್ಷೇತ್ರ) ಕಾಲಾವಧಿ ಮುಕ್ತಾಯವಾಗುತ್ತಿದೆ.
ಇದನ್ನೂ ಓದಿ: ವೃದ್ಧೆ ಮೇಲೆ ಹಲ್ಲೆ ನಡೆಸಿ, ರಾತ್ರೋರಾತ್ರಿ ಮನೆ ನೆಲಸಮ ಮಾಡಿದ ದುಷ್ಕರ್ಮಿಗಳು
ಇದರ ಜೊತೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಕೆ.ವೈ. ನಾರಾಯಣಸ್ವಾಮಿ, ಲೆಹರ್ ಸಿಂಗ್ ಸೇರಿದಂತೆ ಮೂವರ ಸ್ಥಾನ ತೆರವಾಗುತ್ತಿದೆ. ಸದ್ಯದ ವಿಧಾನಸಭೆ ಸದಸ್ಯರ ಸಂಖ್ಯಾಬಲದ ಮೇಲೆ ಕಾಂಗ್ರೆಸ್ ನಾಲ್ಕರ ಪೈಕಿ ಇಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪರಿಷತ್ನಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಜೆಡಿಎಸ್ ತಮ್ಮ ಸದಸ್ಯರಿಗೆ ಬಿಜೆಪಿ ಬೆಂಬಲ ಇಲ್ಲವೇ ಬಿಜೆಪಿಯ ಐದನೇ ಅಭ್ಯರ್ಥಿಗೆ ತನ್ನ ಬೆಂಬಲ ಸೂಚಿಸಬಹುದು. ಒಟ್ಟಾರೆ ಬಿಜೆಪಿಗೆ ಈ ಚುನಾವಣೆಗಳ ನಂತರ ಜೂನ್ ವೇಳೆಗೆ ಸರಿಸುಮಾರು ಕನಿಷ್ಠ 8 ಸದಸ್ಯರ ಬಲವಾದರೂ ಹೆಚ್ಚಳವಾಗುವ ನಿರೀಕ್ಷೆ ಇದೆ.
ಅಲ್ಲಿಗೆ ಬಿಜೆಪಿ ಸಂಖ್ಯಾಬಲ 37+1+8= 46ಕ್ಕೆ ಏರುವ ಸಾಧ್ಯತೆ ಇದೆ. ಬಸವರಾಜ ಹೊರಟ್ಟಿ ಬಿಜೆಪಿ ಸೇರಿ ಗೆದ್ದರೆ ಅವರೇ ಸಭಾಪತಿಯಾಗಿ ಮುಂದುವರಿಯಬಹುದು. ಇಲ್ಲವೇ ಬಿಜೆಪಿ ತಮ್ಮವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಸ್ವತಂತ್ರವಾಗಿ ಸಭಾಪತಿ ಆಯ್ಕೆ ಮಾಡಿಕೊಳ್ಳುವ ಸಂಖ್ಯಾಬಲ ಬಿಜೆಪಿಗೆ ಜೂನ್ ವೇಳೆಗೆ ಲಭಿಸಲಿದೆಯೆಂದು ಅಂದಾಜಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಸ್ಥಿತಿಯೇ ಇನ್ನಷ್ಟು ಶೋಚನೀಯವಾಗುವ ಸಾಧ್ಯತೆ ಇದೆ.