ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯ ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಸೇರಿದಂತೆ ಹಲವು ನಾಯಕರು ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಆಚರಣೆಯಾಗುತ್ತಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಅತ್ಯಂತ ಪರಿಣಾಮಕಾರಿಯಾಗಿ ಆಚರಣೆಯಾಗಲಿ ಎಂದು ಆಶಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, "ಭಾರತದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ, ಪೋಷಣೆ, ಆರೈಕೆ, ರಕ್ಷಣೆ, ಸಾಮಾಜಿಕ ಹಕ್ಕುಗಳಿಂದ ವಂಚಿತರಾಗುವುದರ ವಿರುದ್ಧ, ಹೆಣ್ಣು ಮಗುವಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ಸೃಷ್ಟಿಸುವ ಕುರಿತು ಜಾಗೃತಿ ಮೂಡಿಸಲು, ಯುಪಿಎ ಸರ್ಕಾರ 2008ರಲ್ಲಿ ಜನವರಿ 24ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ' ದಿನ ಎಂದು ಘೋಷಿಸಿತು" ಎಂದಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಟ್ವೀಟ್ ಮಾಡಿದ್ದು,"ಕಲಿತ ಹೆಣ್ಣು ಮನೆಯ ಕಣ್ಣು" ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆಸುವ ನಿಟ್ಟಿನಲ್ಲಿ ಮುಂದೆ ಸಾಗುವ ಸಂಕಲ್ಪ ಮಾಡುವ ದಿನ. ಹೆಣ್ಣಿನ ವಿರುದ್ಧದ ಎಲ್ಲ ತಾರತಮ್ಯಗಳನ್ನು ತೊಡೆದು ಹಾಕುವ ಮತ್ತು ಅವರ ಬಗೆಗಿನ ಸಮಾಜದ ದೃಷ್ಟಿಕೋನ ಬದಲಿಸುವ ಅವಶ್ಯಕತೆ ಇದೆ.
ಹೆಣ್ಣು ಸಬಲ, ಸ್ವಾವಲಂಬಿಯಾದಾಗ ಮಾತ್ರ ಸಮಾಜ ಆಕೆಯನ್ನು ಹೆಚ್ಚು ಗೌರವದಿಂದ ಕಾಣುತ್ತದೆ. ಶಿಕ್ಷಣಕ್ಕೆ ಮಾತ್ರ ಆಕೆಯನ್ನು ಸ್ವಾವಲಂಬಿಯಾಗಿಸುವ ಶಕ್ತಿ ಇದೆ. ಆ ಶಿಕ್ಷಣವನ್ನು ಆಕೆಗೆ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣಕ್ಕೆ ನಾವೆಲ್ಲರೂ ಮಹತ್ವ ನೀಡೋಣ. ಎಲ್ಲರಿಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು" ಎಂದಿದ್ದಾರೆ.
ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಸಿಗುತ್ತಿಲ್ಲ. ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ. ಬೇಟಿ ಬಚಾವೋ ಬೇಟಿ ಪಡಾವೋ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು ಸಮರ್ಥವಾಗಿ ಜಾರಿಗೆ ಬಂದಿಲ್ಲ ಎಂದು ಆರೋಪಿಸುತ್ತಾ ಬಂದಿದ್ದು, ಇಂದು ವಿಶ್ವ ಹೆಣ್ಣು ಮಕ್ಕಳ ದಿನ ಆಚರಣೆ ಸಂದರ್ಭ ಮತ್ತೊಮ್ಮೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.