ಬೆಂಗಳೂರು/ಬೆಳಗಾವಿ : ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಸುವರ್ಣಸೌಧದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಮಾಜಿ ಡಿಸಿಎಂ ಜಿ ಪರಮೇಶ್ವರ್ ಸೇರಿದಂತೆ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಹೋರಾಟಕ್ಕೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಮೇಲೆ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬಿಟ್ ಕಾಯಿನ್ ಹಾಗೂ 40% ಕಮೀಷನ್ ಆರೋಪದ ಬಗ್ಗೆಯೂ ಸಿಎಲ್ಪಿ ಸಭೆಯಲ್ಲಿ ನಾಯಕರು ಚರ್ಚಿಸಿದ್ದು, ಈ ವಿಚಾರಗಳನ್ನು ಸದನದಲ್ಲಿ ಯಾವ ರೀತಿ ಮಂಡಿಸಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಬೇಕು ಎಂಬ ಕುರಿತಾದ ಸಮಾಲೋಚನೆ ನಡೆದಿದೆ.
ಯಾರೆಲ್ಲಾ ಮಾತನಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಎಪಿಎಂಸಿ ಕಾಯ್ದೆ ವಾಪಸ್ಗೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡನೆ ಮಾಡುವ ಸಾಧ್ಯತೆ ಸಹ ಇದ್ದು, ಈ ಬಗ್ಗೆ ಇಂದಿನ ಶಾಸಕಾಂಗ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ.
ನೂತನ ಸದಸ್ಯರಿಗೆ ಅಭಿನಂದನೆ : ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿರುವ ಸಲೀಂ ಅಹ್ಮದ್ ಹಾಗೂ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿರುವ ಚನ್ನರಾಜ್ ಹಟ್ಟಿಹೊಳಿ ಅವರನ್ನು ವೇದಿಕೆ ಮೇಲೆ ಅಭಿನಂದಿಸಲಾಯಿತು. ಇದೇ ಸಂದರ್ಭ ನೂತನ ಸದಸ್ಯರು ರಾಜ್ಯ ನಾಯಕರ ಕಾಲಿಗೆರಗಿ ತಮ್ಮ ಗೌರವ ಸಲ್ಲಿಸಿದರು.
ಕೊಂಚ ಬೇಸರ : ಕೆಲವು ಕ್ಷೇತ್ರಗಳಲ್ಲಿ ಅನಿರೀಕ್ಷಿತ ಸೋಲಾಗಿರುವ ಬಗ್ಗೆ ಕೈ ನಾಯಕರು ಬೇಸರ ವ್ಯಕ್ತಪಡಿಸಿದರು. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿನ ಸೋಲಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರಿಗೆ ಪರಿಷತ್ ಕಲಾಪದಲ್ಲಿ ಬಿಜೆಪಿಯವರನ್ನು ಸರಿಯಾಗಿ ಜಾಡಿಸಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು.
ಸಭೆಯಲ್ಲಿ ಸಿಎಂ ಇಬ್ರಾಹಿಂ, ಅಜಯ್ ಸಿಂಗ್, ಜಾರ್ಜ್, ಪ್ರಿಯಾಂಕ್ ಖರ್ಗೆ, ದದ್ದಲ್, ಕುಸುಮಾ ಶಿವಳ್ಳಿ, ನಾರಾಯಣಸ್ವಾಮಿ, ನರೇಂದ್ರ, ಭೈರತಿ ಸುರೇಶ್, ಹುಣಸೂರು ಮಂಜುನಾಥ್ ಸೇರಿದಂತೆ ಹಲವಾರು ಕೈ ಶಾಸಕರು,ನಾಯಕರು ಉಪಸ್ಥಿತರಿದ್ದರು.