ಬೆಂಗಳೂರು: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದಿನಿಂದ ಒಂದು ವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ 9 ಪ್ರತ್ಯೇಕ ತಂಡಗಳು ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಈಶ್ವರಪ್ಪರನ್ನು ಬಂಧಿಸಿ ಹಾಗೂ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಲಿದೆ.
![Congress leaders Protests Against KS Eshwarappa](https://etvbharatimages.akamaized.net/etvbharat/prod-images/15031612_1081_15031612_1650085235739.png)
ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಕೆ. ಪಾಟೀಲ್ ಕುಟುಂಬಕ್ಕೆ ಪರಿಹಾರ, ಅವರ ಪತ್ನಿಗೆ ಸರ್ಕಾರಿ ಉದ್ಯೋಗ, ಕಾಮಗಾರಿ ವೆಚ್ಚ ಭರಿಸುವುದು, ಈಶ್ವರಪ್ಪ ಬಂಧನ ಹಾಗೂ ನ್ಯಾಯಾಂಗ ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಅಲ್ಲಿನ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಮ್ಮ ಮನವಿ ಪತ್ರ ಸಲ್ಲಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿದಂತೆ ವಿವಿಧ ನಾಯಕರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಇವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆಯಲಿದೆ. ಇದೇ ಸಂದರ್ಭ ಕಾಂಗ್ರೆಸ್ ನಾಯಕರು ಬೆಲೆ ಏರಿಕೆ ಕ್ರಮವನ್ನು ಸಹ ಖಂಡಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದೆ. ಈ ಸಂಬಂಧ ಸಂಸದ ಡಿ.ಕೆ. ಸುರೇಶ್ ವಿಶೇಷ ಸಂದೇಶವನ್ನು ಸಹ ಬಿಡುಗಡೆ ಮಾಡಿದ್ದಾರೆ.
![Congress leaders Protests Against KS Eshwarappa](https://etvbharatimages.akamaized.net/etvbharat/prod-images/kn-bng-01-congress-tour-script-7208077_16042022093251_1604f_1650081771_1039.jpeg)
ಸಿದ್ದರಾಮಯ್ಯ ಪ್ರವಾಸ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿನಿಂದ ಏ.20ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರತಿಭಟನೆ ನಡೆಲಿದ್ದಾರೆ. ಇಂದು ಬೆಳಗ್ಗೆ ಚಿಕ್ಕಮಗಳೂರಿನಲ್ಲಿ, ಭಾನುವಾರ ಹಾಸನ, ಸೋಮವಾರ ಮಂಡ್ಯ, ಮಂಗಳವಾರ ಚಾಮರಾಜನಗರ ಹಾಗೂ ಕಡೆಯ ದಿನವಾದ ಬುಧವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ವಿಧಾನಸೌಧದ ಗೋಡೆಗೆ ಹೊಡೆದ್ರೇ ಕಾಸು. ಕಾಸು.. ಕಾಸು... ಎನ್ನುತ್ತದೆ.. ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್.. ಡಿಕೆಶಿ