ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ವ್ಯಾಕ್ಸಿನ್ ಕೊರತೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಕ್ಸಿನ್ ಬಂದ ಸಂದರ್ಭದಲ್ಲಿ ಇದರ ಪ್ರಚಾರಕ್ಕಾಗಿ ಮಾಡಿದ ಪ್ರಯತ್ನವನ್ನು ಇದೀಗ ಕೊರತೆಯ ನಿವಾರಣೆಗೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು , ಕೋವಿಡ್ ವ್ಯಾಕ್ಸಿನ್ ನೀಡಿದ ಬಳಿಕ ಕೊಡುವ ಸರ್ಟಿಫಿಕೇಟ್‌ನಲ್ಲಿ ತಮ್ಮ ಫೋಟೋ ಹಾಕಿಕೊಳ್ಳುವ ಮೋದಿಯವರು, ಕೊರೊನಾ ವೈಫಲ್ಯಕ್ಕೂ ತಾವೇ ಕಾರಣ ಎಂದು ಫ್ಲೆಕ್ಸ್, ಬ್ಯಾನರ್ ಹಾಕಿಕೊಳ್ಳಬೇಕು. ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಮೋದಿಯವರ ವೈಫಲ್ಯ ಪ್ರಕಟವಾಗಿ ಮಾನ ಹರಾಜಾಗಿದೆ. ಮೋದಿ ನೇತೃತ್ವದ ಸರ್ಕಾರದ ಸ್ವಯಂಕೃತಾಪರಾಧದಿಂದ ದೇಶ ಇಂದು ಸ್ಮಶಾನವಾಗಿದೆ ಎಂದಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಟ್ವೀಟ್ ಮಾಡಿ, ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ಆರಂಭವಾಗಿ ವಾರಗಳೇ ಆಯ್ತು. ಇದುವರೆಗೂ ಕೇಂದ್ರಸರ್ಕಾರ ಕರ್ನಾಟಕಕ್ಕೆ ವ್ಯಾಕ್ಸಿನ್ ಪೂರೈಕೆ ಹೆಚ್ಚಿಸಿಲ್ಲ. ನಿನ್ನೆ ರಾಜ್ಯದಲ್ಲಿ ಕೇವಲ 32 ಸಾವಿರ ಜನರಿಗಷ್ಟೇ ವ್ಯಾಕ್ಸಿನ್ ಹಾಕಲಾಗಿದೆ. 40 ರಿಂದ 50 ಸಾವಿರ ಕೊರೊನಾ ಕೇಸ್ಗಳು ಪತ್ತೆಯಾಗುತ್ತಿರುವಾಗ ವ್ಯಾಕ್ಸಿನ್ ಅರೆಕಾಸಿನ ಮಜ್ಜಿಗೆಯಂತಾಗಿದೆ. ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ 6.5 ಕೋಟಿ ಡೋಸ್ನಷ್ಟು ವ್ಯಾಕ್ಸಿನ್ ರಫ್ತು ಮಾಡಿದರು. ಆ ವ್ಯಾಕ್ಸಿನ್ ನಮ್ಮ ದೇಶದ ಜನರ ಬಳಕೆಗೆ ಮುಂದಾಗಿದ್ದರೆ ಇವತ್ತು ಜನ ಈ ಪ್ರಮಾಣದಲ್ಲಿ ಸಾಯುವ ಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಮನೆಗೆ ಮಾರಿ, ಪರರಿಗೆ ಉಪಕಾರಿ ಅನ್ನೋ ಗಾದೆ ಮಾತಿನಂತೆ ನರೇಂದ್ರ ಮೋದಿಯವರು ಜಗತ್ತಿಗೆ ವ್ಯಾಕ್ಸಿನ್ ಕೊಡುತ್ತೇನೆ ಎಂದು ತೋರಿಸಿಕೊಳ್ಳಲು ಹೋಗಿ ನಮ್ಮ ದೇಶದ ಜನರ ಜೀವ ಒತ್ತೆ ಇಟ್ಟಿದ್ದಾರೆ. 6.5 ಕೋಟಿ ಡೋಸ್ ಅಮೂಲ್ಯ ವ್ಯಾಕ್ಸಿನ್ ನಮ್ಮಲ್ಲೇ ಉಳಿದಿದ್ದರೆ, ಉತ್ಪಾದನೆಯಲ್ಲಿನ ಕೊರತೆ ನೀಗಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಾರದಲ್ಲಿ 4 ದಿನ ಸಂಪೂರ್ಣ ಲಾಕ್ಡೌನ್: ಸಿಎಂ ಜತೆ ಚರ್ಚಿಸಿ ತೀರ್ಮಾನ- ಡಾ. ಸುಧಾಕರ್