ಬೆಂಗಳೂರು: ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಅಮೃತ ಸ್ವಾತಂತ್ರ್ಯ ಮಹೋತ್ಸವ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2.30 ಕ್ಕೆ ಆರಂಭವಾದ ಪಾದಯಾತ್ರೆ ಸಂಜೆ 5 ಗಂಟೆ ಹೊತ್ತಿಗೆ ನ್ಯಾಷನಲ್ ಕಾಲೇಜು ಮೈದಾನ ತಲುಪಿ ಸಮಾವೇಶಗೊಂಡಿತು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇತರ ನಾಯಕರು ಭಾಗಿಯಾದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಕೆಲವು ದೂರ ಮಾತ್ರ ಸಂಚರಿಸಿ ನಂತರ ನೇರವಾಗಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿದರು. ಸಾವಿರಾರು ಕಾರ್ಯಕರ್ತರು ನಡಿಗೆಯಲ್ಲಿ ಪಾಲ್ಗೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.
ಸ್ವಾತಂತ್ರ್ಯ ನಡಿಗೆ ಪಕ್ಷಾತೀತ ಕಾರ್ಯಕ್ರಮವಾಗಿದ್ದು ಭಾಷಣಕ್ಕೆ ಅವಕಾಶ ಇಲ್ಲ ಎಂದು ಮೊದಲು ತಿಳಿಸಲಾಗಿತ್ತು. ಜನಪ್ರಿಯ ಗಾಯಕ ಹರಿಹರನ್ರಿಂದ ಸಂಗೀತ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ವೇದಿಕೆ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಬಿ.ಕೆ.ಹರಿಪ್ರಸಾದ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಬ್ಬರ ನಂತರ ಒಬ್ಬರು ಭಾಷಣ ಮಾಡಿದರು.
ಇದನ್ನೂ ಓದಿ: ಚುನಾವಣೆಗೆ ಹೋಗುವ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ: ಸಚಿವ ಕಾರಜೋಳ