ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಕಾನೂನು ನೋಟಿಸ್ಗೆ ಪ್ರತಿಯಾಗಿ ನ್ಯಾಯಾಂಗ ತನಿಖೆಯ ಅಸ್ತ್ರವನ್ನು ಬಳಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.
ಬಿಜೆಪಿ ಲೀಗಲ್ ಅಸ್ತ್ರಕ್ಕೆ, ಕೈ ನ್ಯಾಯಾಂಗ ತನಿಖೆ ಪ್ರತ್ಯಾಸ್ತ್ರ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಸಲುವಾಗಿ ಖರೀದಿಸಿದ ಸಲಕರಣೆಗಳಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದಕ್ಕೆ ಅಗತ್ಯ ದಾಖಲೆಯನ್ನೂ ಬಿಡುಗಡೆ ಮಾಡಿದೆ.
ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಸರ್ಕಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ, ವಿಧಾನ ಪರಿಷತ್ ಸದಸ್ಯರ ಮೂಲಕ ಲೀಗಲ್ ನೋಟಿಸ್ ನೀಡಿದೆ. ಇದೀಗ ಇದೇ ವಿಚಾರ ಮುಂದಿಟ್ಟು ಜನರ ಮುಂದೆ ತೆರಳಲು ನಿರ್ಧರಿಸಿರುವ ಕಾಂಗ್ರೆಸ್, ಜತೆ ಜತೆಗೆ ನ್ಯಾಯಾಂಗ ತನಿಖೆಯ ಒತ್ತಡವನ್ನೂ ಹೇರಲು ಮುಂದಾಗಿದೆ.
ಬಿಜೆಪಿ ಕೊಟ್ಟಿರುವ ಲೀಗಲ್ ನೋಟಿಸ್ ಬಗ್ಗೆ ಕಾಂಗ್ರೆಸ್ನಲ್ಲಿ ಭಾರಿ ಚರ್ಚೆ ನಡೆದಿದೆ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಡ್ಯ, ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇಬ್ಬರೂ ಪರಸ್ಪರ ಮಾತುಕತೆ ನಡೆಸಿದ್ದು, ಕೆಪಿಸಿಸಿ ಇಂದ ಜಿಲ್ಲಾ ಘಟಕಗಳಿಗೆ ಸೂಚನೆ ರವಾನೆ ಮಾಡಲಾಗಿದೆ.
ಲೀಗಲ್ ನೋಟೀಸ್ ಕೊಟ್ಟ ಬಳಿಕ ಮತ್ತಷ್ಟು ಗಟ್ಟಿ ಧ್ವನಿಯಿಂದ ಪ್ರತಿಭಟನೆ ಮಾಡುವಂತೆ ಸೂಚನೆ ರವಾನೆ ಮಾಡಲಾಗಿದೆ. ಬೂತ್ ಮಟ್ಟಕ್ಕೆ ಲೆಕ್ಕಕೊಡಿ ಅಭಿಯಾನ ತೆಗೆದುಕೊಂಡು ಹೋಗುವಂತೆ ಸೂಚನೆ ರವಾನೆ ಮಾಡಲಾಗಿದೆ. ಶತಾಯ ಗತಾಯ ರಾಜ್ಯ ಸರ್ಕಾರವನ್ನು ಈ ವಿಚಾರದಲ್ಲಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವುದು ಹಾಗೂ ಜನರ ದೃಷ್ಟಿಯಲ್ಲಿ ಒಂದಿಷ್ಟು ಒಳ್ಳೆಯ ಅಭಿಪ್ರಾಯ ಪಡೆಯುವುದು ಕಾಂಗ್ರೆಸ್ ಉದ್ದೇಶವಾಗಿದೆ.
ಲೀಗಲ್ ನೋಟೀಸ್ಗೆ ಯಾವುದೇ ಬೆಲೆ ಇಲ್ಲ. ನ್ಯಾಯಾಂಗ ತನಿಖೆಗೆ ಕೊಡುವಂತೆ ಒತ್ತಾಯಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ತಮಗೆ ಲೀಗಲ್ ನೋಟಿಸ್ ನೀಡಿರುವ ರಾಜ್ಯ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ.