ಬೆಂಗಳೂರು: ಬಿಜೆಪಿಯವರು ಹರ್ ಘರ್ ತಿರಂಗ ನಾಟಕ ಆಡುತ್ತಿದ್ದಾರೆ. ಆ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದಾರಾ? ಸತ್ತಿದ್ದಾರಾ?, ಈ ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು. ಇವರ ದೇಶಪ್ರೇಮ ತೋಳ ಕುರಿಮರಿ ಕತೆಯಾಗಿದೆ. ನರೇಂದ್ರ ಮೋದಿ ದೊಡ್ಡ ನಾಟಕಕಾರ. ಈ ನಕಲಿ ದೇಶಪ್ರೇಮಿಗಳ ಬಾಯಿಮುಚ್ಚಿಸುವ ಕಾರ್ಯ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾದಯಾತ್ರೆಯಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ ಸಿದ್ಧತೆ ನಡೆಸಿದ್ದೇವೆ. ಎಲ್ಲರೂ ತನು, ಮನ, ಧನಗಳಿಂದ ಸಹಕಾರ ನೀಡಬೇಕು. ಇದೊಂದು ಐತಿಹಾಸಿಕ ನಡಿಗೆ ಆಗಬೇಕು. ಮೆಜೆಸ್ಟಿಕ್‌ನಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ತೆರಳಿ ಸಮಾವೇಶ ನಡೆಸುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, 80 ವರ್ಷದ ಹಿಂದೆ ಕ್ವಿಟ್ ಇಂಡಿಯಾ ಚಳುವಳಿಗೆ ಮಹಾತ್ಮ ಗಾಂಧೀಜಿ ಕರೆಕೊಟ್ಟಿದ್ದರು. ನಾವು ನೀವು ಸೇರಿ ಇಂದು ಬಿಜೆಪಿ ಅಧಿಕಾರ ಬಿಟ್ಟು ಕೆಳಗಿಳಿಯಿರಿ ಅಂತ ಹೋರಾಡಬೇಕಿದೆ. ರಾಷ್ಟ್ರ ಧ್ವಜವನ್ನು ಬಿಜೆಪಿಯವರು ಮಾರಾಟಕ್ಕಿಟ್ಟಿದ್ದಾರೆ. ರಾಜ್ಯದಲ್ಲಿ ಸ್ವಾಭಿಮಾನ ಇರಬೇಕೆಂದರೆ 25 ರೂಪಾಯಿ ನೀವೇ ಹಾಕಿ ಜನರಿಗೆ ಉಚಿತವಾಗಿ ಧ್ವಜ ನೀಡಿ ಎಂದು ಟೀಕಿಸಿದರು.
ಪರಸ್ಪರ ಟೋಪಿ ಹಾಕಿಕೊಂಡ ಕೈ ನಾಯಕರು: ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆ ಹಿನ್ನೆಲೆಯಲ್ಲಿ ಟೋಪಿ ಮತ್ತು ಟೀ ಶರ್ಟ್ ಹಾಗೂ ಕರ ಪತ್ರವನ್ನು ಕೈ ನಾಯಕರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕೈಯಿಂದ ಕೆ.ಜೆ.ಜಾರ್ಜ್ಗೆ ಟೋಪಿ ಹಾಕಿಸಿದ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಕೈಲಿ ಉಗ್ರಪ್ಪಗೆ ಟೋಪಿ ಹಾಕಿಸಿದರು. ಬಳಿಕ ತಾವೇ ಸ್ವತಃ ಸಿದ್ದರಾಮಯ್ಯಗೆ ಟೋಪಿ ಹಾಕಿದರು. ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಸಿದ್ದರಾಮಯ್ಯ ತಲೆಗೆ ಟೋಪಿ ತೊಡಿಸಿದರು. ಡಿಕೆಶಿಗೆ ಸಿದ್ದರಾಮಯ್ಯ ಟೋಪಿ ಹಾಕಿದರು.
ಇದನ್ನೂ ಓದಿ : ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆಯಲ್ಲಿ ಪುತ್ರರೊಂದಿಗೆ ಶಾಸಕ ನಡಹಳ್ಳಿ ಸಖತ್ ಸ್ಟೆಪ್ಸ್