ಬೆಂಗಳೂರು: ಮೈಸೂರು ಜಿಲ್ಲೆಯ ನಂಜನಗೂಡಿನ ಜುಬಿಲಂಟ್ ಜನೆರಿಕ್ ಕಂಪನಿ ವಿರುದ್ಧ 'ಸೇವ್ ನಂಜನಗೂಡು ಫೋರಂ' ಹೆಸರಿನ ಸಂಘಟನೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡಿರುವ ಹೈಕೋರ್ಟ್ ಏ. 21ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಪತ್ರದಲ್ಲಿ ಜುಬಿಲಂಟ್ ಸಂಸ್ಥೆಯಿಂದ ಹೇಗೆಲ್ಲಾ ಕೊರೊನಾ ಹರಡಿತು ಮತ್ತು ಸಂಸ್ಥೆಯ ಲೋಪಗಳೇನು ಎಂದು ವಿವರಿಸಲಾಗಿದೆ. ನಂಜನಗೂಡಿನಲ್ಲಿ 25ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಜುಬಿಲಂಟ್ ಕಂಪನಿಯ ರೋಗಿ ಸಂಖ್ಯೆ-52ರಿಂದ ಈ ಪ್ರಮಾಣದಲ್ಲಿ ರೋಗ ಹರಡಲು ಕಾರಣವಾಗಿದೆ. ಜುಬಿಲಂಟ್ ಕಂಪನಿ ಉತ್ತರಾಖಂಡ್, ಉತ್ತರ ಪ್ರದೇಶ, ಗುಜರಾತ್‍ನಲ್ಲೂ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕೊರೊನಾ ಎಪಿಕ್ ಸೆಂಟರ್ ಎನ್ನಲಾದ ಚೀನಾದ ಹುಬೈ ಪ್ರಾಂತ್ಯದಿಂದ ಈ ಕಂಪನಿ ಕಚ್ಚಾ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಚೀನಾದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಂದ ಕಂಟೈನರ್ 2019ರ ಡಿಸೆಂಬರ್‌ನಲ್ಲಿ ಇಲ್ಲಿಗೆ ಬಂದು ಹೋಗಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು ಇಲ್ಲಿಗೆ ಬಂದು ಹೋಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮೈಸೂರಿನಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಲು ಇದೇ ಸಂಸ್ಥೆ ಕಾರಣವಾಗಿದ್ದು, ಇಡೀ ನಂಜನಗೂಡು ಪಟ್ಟಣವನ್ನೇ ತಪಾಸಣೆಗೆ ಒಳಪಡಿಸಬೇಕು. ನಂಜನಗೂಡು ಒಂದಕ್ಕೆ ಕನಿಷ್ಠ 10 ಸಾವಿರ ಟೆಸ್ಟಿಂಗ್ ಕಿಟ್‍ಗಳ ಅವಶ್ಯಕತೆಯಿದೆ. ಸದ್ಯ ರೋಗಿ-56ರ ಪ್ರಾಥಮಿಕ ಸಂಪರ್ಕದ ಸಹದ್ಯೋಗಿಗಳು, ಕುಟುಂಬದವರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಆದರೆ ಕಂಪನಿಯ ಎಲ್ಲಾ ನೌಕರರು ಹಾಗೂ ಅವರ ಎಲ್ಲಾ ಪ್ರಾಥಮಿಕ, ದ್ವೀತಿಯ ಹಾಗೂ ತೃತೀಯ ಹಂತದ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸಬೇಕು. ಈವರೆಗೆ ರೋಗ ಲಕ್ಷಣ ಇಲ್ಲದ 9 ಮಂದಿಗೆ ಪಾಸಿಟಿವ್ ಕಂಡು ಬಂದಿದೆ. ತಪಾಸಣೆ, ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆಗೆ ನಂಜನಗೂಡಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.