ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ, ಬಿಎಎಸ್ವೈ ಕುಟುಂಬದ ಒಡೆತನದ ದವಳಗಿರಿ ಡೆವಲಪರ್ಸ್ ಅಸ್ಥಿತ್ವದಲ್ಲೇ ಇಲ್ಲದ ಜಮೀನುಗಳಿಗೆ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರು ಮೆಟ್ರೋ ರೈಲು ನಿಗಮದಿಂದ 22.92 ಕೋಟಿ ರೂಪಾಯಿ ಪರಿಹಾರ ಪಡೆದು ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾಗವಾರ ಬಳಿ ವೈಯ್ಯಾಲಿ ಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಿಂದ ಬಶೀರ್ ಎಂಬುವರು ಪಡೆದಿದ್ದ ನಿವೇಶನದ ಜತೆಗೆ ಪಕ್ಕದ ರಸ್ತೆಯನ್ನೂ ವಿಲೀನ ಕೋರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮೂರು ಬಾರಿ ಬಿಡಿಎ ತಿರಸ್ಕರಿಸಿತ್ತು. ಹಾಗಿದ್ದೂ, ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ವಿಲೀನಗೊಳಿಸಲಾಗಿತ್ತು. ನಂತರ ರಸ್ತೆ ಸೇರಿ 13.1 ಗುಂಟೆ ಭೂಮಿಯನ್ನು ಬಶೀರ್ ಬಳಿ ಶೇಖರಪ್ಪ ಎಂಬವರು ಖರೀದಿಸಿ ನಂತರ ಧವಳಗಿರಿ ಡೆವಲಪರ್ಸ್ಗೆ ಮಾರಾಟ ಮಾಡಿತ್ತು.
ನಾಗವಾರ ಹೋಬಳಿಯಲ್ಲಿನ 13.1 ಗುಂಟೆ ಭೂಮಿಯನ್ನು ಮಾರಾಟ ಮಾಡುವ ವೇಳೆ ಅಲ್ಲಿನ 100 ಸರ್ವೆ ನಂಬರ್ಗಳನ್ನು ಸೇರಿಸಿ 25 ಸಾವಿರ ಚ.ಅಡಿ ಜಮೀನನ್ನು ಚೆಂಗಪ್ಪ ಹಾಗೂ ಕಮಲ್ ಪಾಷಾ ಎಂಬುವರು ಮಾರಾಟ ಮಾಡಿದಂತೆ ಕ್ರಮ ಪತ್ರ ಮಾಡಲಾಗಿದೆ. ವಾಸ್ತವದಲ್ಲಿ ಸರ್ವೆ ನಂಬರ್ 100ರಲ್ಲಿ ಜಮೀನೇ ಇರಲಿಲ್ಲ. ಹಾಗಿದ್ದೂ ಈ ಎಲ್ಲ ಭೂಮಿಯನ್ನು ಮೆಟ್ರೋ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬಂತೆ ದಾಖಲೆಗಳನ್ನು ಸೃಷ್ಟಿಸಿ ಧವಳಗಿರಿ ಡೆವಲಪರ್ಸ್ 22 ಕೋಟಿ ಪರಿಹಾರ ಪಡೆದಿದೆ ಎಂದು ಟಿಜೆ ಅಬ್ರಹಾಂ ಆರೋಪಿಸಿದ್ದಾರೆ.
ಈ ಸಂಬಂಧ ಮಾಜಿ ಸಿಎಂ ಬಿಎಸ್ವೈ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ಅಳಿಯ ಸೋಹನ್ ಕುಮಾರ್ ಹಾಗೂ ಹೊನ್ನಪ್ಪ ನಿಶಿತ್ ಎಂಬುವರ ವಿರುದ್ದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಎಸಿಬಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಸದನದಲ್ಲಿ ಚರ್ಚಿಸದೇ ಏಕಾಏಕಿ NEP ಜಾರಿಗೆ ತಂದಿರುವುದು ಸರಿಯಲ್ಲ: ಸತೀಶ್ ಜಾರಕಿಹೊಳಿ