ಬೆಂಗಳೂರು: ದಿನೇಶ್ ಕಲ್ಲಹಳ್ಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ತುಮಕೂರಿನಿಂದ ಬಂದು ದೂರು ನೀಡಿದ ವಕೀಲ ಬ್ರಹ್ಮಾನಂದ ರೆಡ್ಡಿ, ದಿನೇಶ್ ಕಲ್ಲಹಳ್ಳಿ ಅವರು ನೀಡಿರುವ ಸಿಡಿ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ವಿಚಾರಣೆ ವೇಳೆ ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ, ದಿನೇಶ್ ಕಲ್ಲಹಳ್ಳಿ ನಡೆ ವಿರುದ್ಧ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
ದುಬೈನಲ್ಲಿ ಮಹಿಳೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಆಕೆ ಬದುಕಿದ್ದಾಳಾ?, ಇಲ್ಲವಾ? ಎಂದು ಗೊತ್ತಾಗುತ್ತಿಲ್ಲ. ಆಕೆಯ ಬಗ್ಗೆ ತನಿಖೆ ಮಾಡಬೇಕು. ಆಕೆಯ ಕುರಿತು ವಿಚಾರಣೆ ಸಹ ಮಾಡಬೇಕು. ಈ ವಿಡಿಯೋ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆ ಹಾಗೂ ರಮೇಶ್ ಜಾರಕಿಹೊಳಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಇನ್ನು ಸಿಡಿಯನ್ನು ತನಿಖೆಗೊಳಪಡಿಸಬೇಕು. ಅದರ ವರದಿ ಬಂದ ನಂತರ ಕ್ರಮ ಕೈಗೊಳ್ಳಬೇಕು. ಹೆಚ್.ಡಿ. ಕುಮಾರಸ್ವಾಮಿ ಡೀಲ್ ಆಗಿದೆ ಎಂದಿದ್ದಾರೆ. ಈ ಬಗ್ಗೆ ಎಲ್ಲಾ ಮಾಹಿತಿ ಇದ್ದು, ಪೊಲೀಸರಿಗೆ ತಿಳಿಸದೇ ಇರೋದರಿಂದ ತಪ್ಪಿತಸ್ಥರ ವಿರುದ್ಧ ಎಫ್ ಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಜಿದ್ದಾಜಿದ್ದಿ ನಡೆದಿತ್ತು. ದೊಡ್ಡ ಮಟ್ಟದ ಷಡ್ಯಂತರದಿಂದ ಚಿತ್ರೀಕರಣ ಮಾಡಿರಬಹುದು ಎಂಬ ಗುಮಾನಿ ಇರುವುದರಿಂದ ವಿಚಾರಣೆ ಮಾಡಬೇಕು. ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.