ಬೆಂಗಳೂರು: ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 95 ಬೃಹತ್ ಕೈಗಾರಿಕೆಗಳು ಅನುಷ್ಟಾನಗೊಂಡಿವೆ. ಇವುಗಳಿಂದ 25,253.40 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 1,16,151 ಜನರಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಮೇಕ್ ಇನ್ ಇಂಡಿಯಾ ಪ್ರಗತಿ ಕುರಿತು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಇಲ್ಲಿಯವರೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 826 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಇವುಗಳಿಂದ 1,14.250.9 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಒಟ್ಟು 2,88,970 ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು 2014ನೇ ಸಾಲಿನಲ್ಲಿದ್ದ ಶೇ.16 ರಿಂದ ಶೇ.25ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿತ್ತು.
ಆದರೆ, ಜಾಗತಿಕ ಆರ್ಥಿಕ ಕುಸಿತ, ಬೇಡಿಕೆ ಇಲ್ಲದಿರುವುದು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದ್ದು, ಭಾರತದ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. 2020-21 ಸಾಲಿನಲ್ಲಿ ಉತ್ಪಾದನಾ ವಲಯದ ಪಾಲು ಶೇ.17 ರಷ್ಟಿದೆ ಎಂದು ವಿವರ ನೀಡಿದರು.
ಮೂಲಸೌಕರ್ಯ ಕಲ್ಪಿಸಲು ಶ್ರಮ
ಅತ್ಯುತ್ತಮ ದರ್ಜೆಯ ಉತ್ಪಾದನಾ ಮೂಲಸೌಕರ್ಯವನ್ನು ನಿರ್ಮಿಸುವ ಸಲುವಾಗಿ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್, ಬೆಂಗಳೂರು ಮುಂಬೈ ಆರ್ಥಿಕ ಕಾರಿಡಾರ್ ಹಾಗೂ ಬೆಂಗಳೂರು ಹೈದರಾಬಾದ್ ಕಾರಿಡಾರ್‌ಗಳಡಿ ಭಾರತ ಸರ್ಕಾರದ ಸಹಯೋಗದೊಂದಿಗೆ ಕೈಗಾರಿಕಾ ನೋಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕ್ರಮವಾಗಿ ತುಮಕೂರಿನ ವಸಂತನರಸಾಪುರದ ಸುಮಾರು 9,600 ಎಕರೆ ಜಮೀನಿನಲ್ಲಿ, ಧಾರವಾಡದ ಸುಮಾರು 6,000 ಎಕರೆ ಜಮೀನಿನಲ್ಲಿ ಹಾಗೂ ಕಡೆಚೂರು ಯಾದಗಿರಿಯ 3000 ಎಕರೆ ಜಮೀನಿನಲ್ಲಿ ಕೈಗಾರಿಕಾ ನೋಡ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ವಲಯದ ಪ್ರಗತಿಯ ವಿವರ ಒದಗಿಸಿದರು.
(ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್.. 23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ, 40ಕ್ಕೂ ಹೆಚ್ಚು ಕಂಪನಿಗಳು ಭಾಗಿ)