ಬೆಂಗಳೂರು: ಟಫ್ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಟಿ ರೌಂಡ್ಸ್ ನಡೆಸಿದರು.
ವೈರ್ ಲೆಸ್ ಮೂಲಕ ಸೂಚನೆ ನೀಡಿದ ನಗರ ಪೊಲೀಸ್ ಆಯುಕ್ತರು ಅನವಶ್ಯಕ ವಾಹನ ಸೀಜ್ ಮಾಡಿ, ಸುಖಾಸುಮ್ಮನೆ ಓಡಾಡುವವರ ಮೇಲೆ ಎನ್ಎಡಿಎಂಎ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು. ಪೊಲೀಸ್ ಸಿಬ್ಬಂದಿ ಕೈಗೊಂಡಿರುವ ಭದ್ರತೆ ಪರಿಶೀಲನೆ ನಡೆಸಿದರು.
ಹೆಬ್ಬಾಳದಲ್ಲಿ ಗರಂ ಆದ ಪಂತ್:
ಹೆಬ್ಬಾಳದ ಸಿಬಿಐ ಜಂಕ್ಷನ್ ಬಳಿ ಗರಂ ಆದ ನಗರ ಪೊಲೀಸ್ ಆಯುಕ್ತರು, ಚೆಕ್ ಪೋಸ್ಟ್ ಅಳವಡಿಸದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳದಲ್ಲಿ ಚೆಕ್ ಪೊಸ್ಟ್ ಮಾಡಲು ಸೂಚಿಸಿದರು. ಸ್ಥಳಕ್ಕೆ ಎಸಿಪಿ ಕರೆಸಿ ಚೆಕ್ ಪೋಸ್ಟ್ ರಚನೆ ಮಾಡದ ಕಾರಣವನ್ನು ಕೇಳಿ ಎಸಿಪಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ಸದಾಶಿವನಗರದದಲ್ಲಿ ಸಿಎಂ ಆಪ್ತ ಎಂದು ಹೈಡ್ರಾಮಾ:
ನಾನು ಫೈನ್ ಕಟ್ಟಲ್ಲ, ಮನೆಗೆ ಹೋಗ್ಬೇಕು ಬಿಡಿ ಪೊಲೀಸರ ಕ್ರಮ ಸರಿ ಅಲ್ಲ ನಾನು ಸಿಎಂ ಆಪ್ತ, ಮನಸ್ಸು ಮಾಡಿದರೆ ಏನಾಗುತ್ತೆ ಗೊತ್ತಾ ಎಂದು ನಗರ ಪೊಲೀಸ್ ಆಯುಕ್ತರ ಮುಂದೆಯೆ ಡ್ರಾಮಾ ಮಾಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಡ ಪಂತ್, ವಾಹನ ಸೀಜ್ ಮಾಡಿ ಎಂದು ಸದಾಶಿವನಗರ ಪೊಲೀಸರಿಗೆ ಸೂಚನೆ ನೀಡಿದರು.
ಖಾಕಿ ಪಡೆಗೆ ಕಟ್ಟು ನಿಟ್ಟಾದ ಸೂಚನೆ ನೀಡಿದ ಎಸಿಪಿ ನಜ್ಮಾ
ಇಂದಿನಿಂದ ಕಟ್ಟು ನಿಟ್ಟಾದ ಲಾಕ್ಡೌನ್ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಮಯವಾಗುತ್ತಿದ್ದ ಹಾಗೆ ಖಾಕಿ ಪಡೆ ಫೀಲ್ಡಿಗಿಳಿದಿದ್ದರು. ಹಲಸೂರು ಗೇಟ್ ಎಸಿಪಿ ನಜ್ಮಾ ಸಿಬ್ಬಂದಿಗೆ ಸೂಚನೆ ನೀಡಿ, ಪ್ರತಿಯೊಂದು ವಾಹನವನ್ನು ಪರಿಶೀಲನೆ ಮಾಡಿ, ಅಗತ್ಯ ಇದ್ದವರನ್ನು ಬಿಟ್ಟು ಕಳುಹಿಸಿ, ಅನಗತ್ಯ ಓಡಾಡುವವರ ವಾಹನ ಮುಲಾಜಿಲ್ಲದೆ ಸೀಜ್ ಮಾಡಿ ಎಂದು ಸಿಬ್ಬಂದಿಗೆ ಹೇಳಿದರು.
ವಾಹನ ಪರಿಶೀಲನೆ ಮಾಡುವಾಗ ನಿಮ್ಮ ಸೇಫ್ಟಿ ನೋಡಿಕೊಳ್ಳಿ, ದುರ್ವರ್ತನೆ ತೋರಿದರೆ ಮನವರಿಕೆ ಮಾಡಿ, ಬಗ್ಗದೆ ಇದ್ದರೆ ಸ್ಟೇಷನ್ ಗೆ ಕರೆದೊಯ್ದು ಕೂರಿಸಿ ಎಂದು ಸೂಚನೆ ನೀಡಿದರು. ನಗರದ ಪ್ರಮುಖ ಸ್ಥಳವಾದ ಕೆ.ಆರ್. ಸರ್ಕಲ್ ಬಳಿ 50ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ.