ಬೆಂಗಳೂರು: ಶಂಕಿತ ಉಗ್ರನೆಂದು ಬಂಧನಕ್ಕೆ ಒಳಗಾದ ಅಬ್ದುರ್ ರೆಹಮಾನ್ಗೆ ಟೆರರಿಸ್ಟ್ ಲಿಂಕ್ ಇದೆ ಎಂದು ತಿಳಿದ ಸಹ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಯಾವಾಗ ನೋಡಿದರು ಗ್ರಂಥಾಲಯದಲ್ಲಿ ಲ್ಯಾಪ್ ಟಾಪ್ನಲ್ಲೇ ಮುಳುಗಿರುತ್ತಿದ್ದ ಈತ ಯಾರ ಜೊತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಈಗ ಈ ವಿಷಯ ತಿಳಿದಾಗ ನಾವು ಹಾಗೂ ನಮ್ಮ ಮನೆಯವರು ಬೆಚ್ಚಿ ಬಿದ್ದಿದೀವಿ ಎನ್ನುತ್ತಾರೆ ಶಂಕಿತನ ಜೊತೆ ಓದುತ್ತಿದ್ದ ಹಾಗೂ ಕೆಲಸ ಮಾಡುತ್ತಿದ್ದ ಸಹ ವೈದ್ಯರು.
ಶಂಕಿತ ಉಗ್ರ ಅಬ್ದುರ್ ರೆಹಮಾನ್ನನ್ನು ರಾಷ್ಟ್ರೀಯ ತನಿಖಾ ದಳ ನಿನ್ನೆ ಬಂಧಿಸಿದೆ. ಬಂಧಿತನ ಬಗ್ಗೆ ಈಟಿವಿ ಭಾರತಕ್ಕೆ ಎಂ.ಎಸ್.ರಾಮಯ್ಯದಲ್ಲಿ ಆತನ ಜೊತೆಗೆ ಕೆಲಸ ಮಾಡುತ್ತಿದ್ದ ವೈದ್ಯರು ಕೆಲ ಮಾಹಿತಿ ನೀಡಿದ್ದಾರೆ.
ಸ್ನಾತಕೋತ್ತರ ನೇತ್ರ ತಜ್ಞ ಪರೀಕ್ಷೆಯಲ್ಲಿ ಇತ್ತೀಚಿಗೆ ಉತ್ತೀರ್ಣ ಆಗಿದ್ದ ರೆಹಮಾನ್, ಎರಡು ವಾರದ ಹಿಂದೆ ಕೋವಿಡ್ ವಾರ್ಡ್ನಲ್ಲಿ ಕೊರೊನಾ ಸೋಂಕಿತರಿಗೂ ಚಿಕಿತ್ಸೆ ನೀಡಿದ್ದರು. ವ್ಯಾಸಂಗ ಮಾಡುತ್ತಿದ್ದ ವೇಳೆ ಸಹಪಾಠಿಯಾಗಿದ್ದ ವೈದ್ಯರು, ಶಂಕಿತ ಉಗ್ರನ ಬಂಧನ ವಿಚಾರ ತಿಳಿದ ಮೇಲೆ ಶಾಕ್ ಆಗಿದ್ದಾರೆ.
ಯಾರ ಜೊತೆಗೂ ಹೆಚ್ವು ಮಾತನಾಡುತ್ತಿರಲಿಲ್ಲ. ಆದ್ರೆ 4-5 ಜನರ ಸ್ನೇಹಿತರೊಂದಿಗೆ ಹೆಚ್ಚು ಬೆರೆಯುತ್ತಿದ್ದ. ಆ ಐದು ಜನರ ಗುಂಪಿನಲ್ಲಿ ಈತನನ್ನು ಹೊರೆತು ಪಡಿಸಿ ಇಬ್ಬರು ಧರ್ಮದ ಬಗ್ಗೆ ಅಪಾಯಕಾರಿಯಾಗಿ ಮಾತನಾಡುತ್ತಿದ್ದರು. ಹೀಗಾಗಿ ಅಬ್ದುರ್ ಜೊತೆಗೆ ಮಾತ್ರ ಕೆಲ ವೈದ್ಯರು ಲೈಬ್ರರಿಯಲ್ಲಿ ಕುಶಲೋಪರಿ ವಿಚಾರಿಸುತ್ತಿದ್ದರು. ಮೂಲಗಳು ಹೇಳುವ ಪ್ರಕಾರ 'ಯಾವಾಗ ನೋಡಿದರು ಲ್ಯಾಪ್ ಟಾಪ್ನಲ್ಲೇ ಕಾಲ ಕಳೆಯುತ್ತಿದ್ದ'. ವೈದ್ಯನ್ನಾಗಿ ಉತ್ತಮ ಕೆಲಸ ಮಾಡುತ್ತಿದ್ದ. ಮೃದು ಸ್ವಭಾವದ ಈತ ಶಂಕಿತ ಉಗ್ರ ಎಂದು ಗೊತ್ತಾದ ಮೇಲೆ ನಮಗೆ ಹಾಗೂ ನಮ್ಮ ಮನೆಯವರಿಗೆ ಆತಂಕ ಮೂಡಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ವೈದ್ಯರು.
ಅಬ್ದುರ್ ಗುಂಪನ್ನು ಯಾರೂ ಮಾತನಾಡಿಸುತ್ತಿರಲಿಲ್ಲ, ಆದರೆ ಆ ಗುಂಪಿನಲ್ಲಿ ಅಬ್ದುರ್ ಮಾತ್ರ ಪರೀಕ್ಷಾ ಸಮಯದಲ್ಲಿ ಇತರೆ ವೈದ್ಯರೊಂದಿಗೆ ಗ್ರಂಥಾಲಯದಲ್ಲಿ ಮಾತನಾಡುತ್ತಿದ್ದ. ಅಬ್ದುರ್ ಶಂಕಿತ ಉಗ್ರ ಎಂದು ನಂಬಲು ಸಾಧ್ಯವಾಗುತ್ತಿಲ್ಲ, ವೈದ್ಯಕೀಯ ವಲಯದಲ್ಲಿ ಜಾತಿ ಧರ್ಮ ಪರಿಗಣಿಸಲ್ಲ, ಇಲ್ಲಿ ಎಲ್ಲರು ಮನುಷ್ಯರೇ. ನಮ್ಮ ಮುಖ್ಯ ಉದ್ದೇಶ ರೋಗ ಮುಕ್ತ ಸಮಾಜ ಕಟ್ಟುವುದು. ಆದರೆ ಈ ರೀತಿ ಘಟನೆಗಳು ಸಂಭವಿಸಿದರೆ ಯಾರನ್ನ ನಂಬಬೇಕು ಎಂದು ಉಬ್ಬೇರಿಸಿ ವೈದ್ಯರೊಬ್ಬರು ಹೇಳಿದರು.
ಈತನ ಜೊತೆ ರಾತ್ರಿ ಪಾಳಿಯಲ್ಲಿ ಸಾಕಷ್ಟು ದಿನ ಕೆಲಸ ನಿರ್ವಹಿಸಿದ ವೈದ್ಯರೊಬ್ಬರು ಹೇಳುವ ಪ್ರಕಾರ, ಒಂದೇ ಸ್ಥಳದಲ್ಲಿ ಒಟ್ಟಿಗೆ ವಿಶ್ರಾಂತಿ ಪಡೆಯುತ್ತಿದ್ದೆವು, ಒಂದು ಕ್ಷಣವೂ ಸಹ ಈತನಿಗೆ ಉಗ್ರ ಸಂಘಟನೆ ಲಿಂಕ್ ಇದೆ ಎಂದು ಸುಳಿವು ಸಿಕ್ಕಿರಲಿಲ್ಲ. ಆದರೆ ಇವನ ಸ್ವಭಾವ ನೋಡಿದ ನಂತರ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ ಇವನ ಬಳಿ ಮಾಹಿತಿ ಪಡೆಯುವುದು ಸುಲಭ ಎನಿಸುತ್ತದೆ. ಈ ಘಟನೆ ನಂತರ ಯಾರ ಜೊತೆ ಮಾತನಾಡಿದರು ಕಷ್ಟ, ಯಾರನ್ನೂ ನಂಬುವಹಾಗಿಲ್ಲ. ಜೊತೆಗೆ ವೈದ್ಯಕೀಯ ಪದವಿ ಪಡೆಯುವುದಕ್ಕೆ ರಾತ್ರಿ ಹಗಲು ಕಷ್ಟ ಪಡುತ್ತೇವೆ. ನಮಗೆ ವೈದ್ಯಕೀಯ ಶಿಕ್ಷಣ ಬಿಟ್ಟರೆ ಬೇರೆ ಯಾವುದಕ್ಕೂ ಸಮಯ ಸಿಗುವುದಿಲ್ಲ. ಇಷ್ಟು ಕಠಿಣ ಶಿಕ್ಷಣದ ನಡುವೆ ಕಂಪ್ಯೂಟರ್ನಲ್ಲಿ ಕೋಡಿಂಗ್ ತಿಳಿದುಕೊಳ್ಳುವುದು ಅಸಾಧ್ಯ ವಿಷಯ. ಈತ ಹೇಗೆ ಎರಡನ್ನು ನಿಭಾಯಿಸಿದ ಎಂದು ಆಶ್ಚರ್ಯ ಆಗುತ್ತಿದೆ ಎನ್ನುತ್ತಾರೆ ವೈದ್ಯರು.
ಉಗ್ರ ಸಂಘಟನೆಯ ಜೊತೆ ಸಂಪರ್ಕ ಇರುವುದು ಜೊತೆಗೆ ವ್ಯಾಸಂಗ ಮಾಡುತ್ತಿದ್ದ ಹಾಗೂ ಕೆಲಸ ಮಾಡುತ್ತಿದ್ದ ವೈದ್ಯರಿಗೆ ಸುಳಿವು ಕೂಡ ಇರಲಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇವನು ಇರಲಿಲ್ಲ. ಇಂದು ಇವನ ಬಂಧನದ ಸುದ್ದಿ ತಿಳಿದ ಮೇಲೆ ಎಂಎಸ್ ರಾಮಯ್ಯ ವೈದ್ಯರಿಗೆ ತಲ್ಲಣ ಸೃಷ್ಟಿಸಿದೆ.