ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ಮಾಡಲು ಜ.20ರಂದು ರಾಜ್ಯ ಕಾಂಗ್ರೆಸ್ ವತಿಯಿಂದ ರಾಜಭವನ ಚಲೋವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಚಾರವಾಗಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ರಾಜಭವನ ಮುತ್ತಿಗೆಗೆ ಅವಕಾಶ ಸಿಗುವುದು ಅಸಾಧ್ಯ. ಆದರೆ ಕನಿಷ್ಠ ಈ ಪ್ರಯತ್ನದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕಿದೆ. ಅಂದು ಎಲ್ಲ ರಾಜ್ಯ ನಾಯಕರನ್ನು ಬರಮಾಡಿಕೊಂಡು ಅಚ್ಚುಕಟ್ಟಾಗಿ ಬೆಂಗಳೂರು ಚಲೋ ಯಶಸ್ವಿಗೊಳಿಸುವ ಜವಾಬ್ದಾರಿ ಎರಡನೇ ಹಂತದ ಎಲ್ಲ ನಾಯಕರ ಮೇಲಿದೆ ಎಂದು ಸಲೀಂ ಅಹಮದ್ ಹೇಳಿದರು.
ಓದಿ-150 ತುರ್ತು ಸ್ಪಂದನಾ ವಾಹನಗಳಿಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ
ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾಗೂ ವ್ಯವಸ್ಥಿತವಾಗಿ ಪ್ರತಿಭಟನೆ ಹಾಗೂ ರಾಜ್ ಭವನ್ ಚಲೋ ಆಯೋಜಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ಹಿನ್ನೆಲೆ ಯಾರ್ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಹಾಗೂ ಅವರ ಕಾರ್ಯನಿರ್ವಹಣೆಯನ್ನು ಹೇಗೆ ಯಶಸ್ವಿಗೊಳಿಸಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಜಿಲ್ಲಾಧ್ಯಕ್ಷ ಜಿ. ಕೃಷ್ಣಪ್ಪ, ಜಿ. ಶೇಖರ್ ಸೇರಿದಂತೆ ಮೂರು ಜಿಲ್ಲೆಗಳ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು.