ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ದಿನಾಂಕವನ್ನು ಮುಂದೂಡಿ ಮತ್ತೆ ದಿನಾಂಕ ನಿಗದಿ ಮಾಡಿರುವ ಕೇಂದ್ರ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ನವೆಂಬರ್ 11ರಂದು ಘೋಷಿಸುವುದಾಗಿ ಹೇಳಿದೆ. ಇದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ನಿರ್ಧಾರಗಳಿಗೆ ನಮ್ಮ ಆಕ್ಷೇಪವಿದೆ. ಸುಪ್ರೀಂಕೋರ್ಟ್ ಅನರ್ಹರ ಸ್ಪರ್ಧೆಗೆ ಮತ್ತು ಚುನಾವಣೆ ಮುಂದೂಡಲು ತಕರಾರು ಇಲ್ಲ ಎನ್ನತ್ತಿದೆ. ಕೇಂದ್ರ ಸರ್ಕಾರ ಹೇಳಿದಂತೆ ಚುನಾವಣಾ ಆಯೋಗ ಕೇಳುತ್ತಿದೆ. ಚುನಾವಣಾ ದಿನಾಂಕ ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಲ್ಲಿರುತ್ತೆ. ಆದರೀಗ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರೂ ನೀತಿ ಸಂಹಿತೆಗೆ ಮಾತ್ರ ಬೇರೆ ದಿನ ಮೀಸಲಿಟ್ಟಿದೆ. ಇದರಿಂದಾಗಿ ಆಯೋಗದ ಮೇಲೆ ವಿಶ್ವಾಸ ಇಲ್ಲದಂತಾಗಿದೆ ಎಂದು ಹೇಳಿದರು.
ಇದು ನಾವು ತೆಗೆದುಕೊಂಡ ತೀರ್ಮಾನವಲ್ಲ. ಇದು ಕೇಂದ್ರದ ಚುನಾವಣಾ ಆಯೋಗದ ನಿರ್ಧಾರ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಕೂಡಲೇ ಮಾದರಿ ನೀತಿ ಸಂಹಿತೆ ಜಾರಿಗೆ ತರಬೇಕು. ಇಲ್ಲದಿದ್ದರೆ ಆಯೋಗದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ದುರುದ್ದೇಶದಿಂದ ಬಿಬಿಎಂಪಿ ಚುನಾವಣೆ ಮುಂದೂಡಿಕೆ: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸುಳಿಯಲ್ಲಿತ್ತು. ಒಳಜಗಳ, ಭಿನ್ನಾಭಿಪ್ರಾಯ ಹಾಗೂ ದುರುದ್ದೇಶದಿಂದ ಚುನಾವಣೆಯನ್ನು ಮುಂದೂಡಿದೆ. ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ತಂತಿ ಮೇಲೆ ನಡೆಯುತ್ತಿದ್ದೇನೆ ಎಂದಿರುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹತಾಶೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಲೂಟಿ, ವರ್ಗಾವಣೆ ದಂಧೆ, ತನಿಖೆ ಮಾಡುವುದರಲ್ಲಿ ನಿರತವಾಗಿದೆ. ಹಳೆಯ ಕಾಮಗಾರಿಗಳಿಗೆ ತಡೆ ನೀಡಿದೆ. ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಟೀಕಿಸಿದರು.