ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ವಿಶ್ವಾಸ ಮತ ಗೆಲ್ಲುವಲ್ಲಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ನಿರ್ಣಯ ಮಂಡಿಸಿ ಭಾಷಣ ಮಾಡಿದ ಬಳಿಕ ಬಿಎಸ್ವೈ ವಿಶ್ವಾಸ ಮತಯಾಚನೆ ಮಾಡಿದ್ದು, ಧ್ವನಿ ಮತದ ಮೂಲಕ ವಿಶ್ವಾಸ ಮತ ಗಳಿಸಿದರು. ಮ್ಯಾಜಿಕ್ ಸಂಖ್ಯೆ 104 ಇದ್ದು, ಬಿಜೆಪಿ 106 ಸಂಖ್ಯೆ ಗಳಿಸಿ ಬಹುಮತ ಪಡೆದರೆ, ಇತ್ತ ಜೆಡಿಎಸ್-ಕಾಂಗ್ರೆಸ್ಗೆ 100 ಮತ ಗಳಿಸಿತು.
ಶಾಸಕರ ಅನರ್ಹತೆಯಿಂದಾಗಿ ಸದನದ ಒಟ್ಟು ಬಲವು 204ಕ್ಕೆ ಕುಸಿದಿದ್ದರ ಹಿನ್ನೆಲೆಯಲ್ಲಿ ಮ್ಯಾಜಿಕ್ ನಂಬರ್ 104ಕ್ಕೆ ನಿಗದಿಯಾಗಿತ್ತು.
ವಿಶ್ವಾಸ ಮತಯಾಚನೆ ಮುನ್ನ ಬಿಎಸ್ವೈ ಭಾಷಣ:
ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗ ರಾಜ್ಯಪಾಲರು ಸರ್ಕಾರ ರಚನೆಗೆ ನನಗೆ ಆಹ್ವಾನ ನೀಡಿದರು. ಅದರಂತೆ ಕಳೆದ ಶುಕ್ರವಾರ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಬರಗಾಲ ಇದೆ, ರೈತರು ಸಂಕಷ್ಟದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಮೊದಲ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು ಕಂತುಗಳಲ್ಲಿ ಹೆಚ್ಚುವರಿ ತಲಾ ಎರಡು ಸಾವಿರ ರೂ. ನೀಡಲು ತೀರ್ಮಾನಿಸಿದ್ದೇನೆ, ನೇಕಾರರ ಸಾಲವನ್ನೂ ಮನ್ನಾ ಮಾಡಿದ್ದೇನೆ. ಜನ ಸೇವೆ ಜನಾರ್ಧನ ಸೇವೆ ಎಂದು ಕೊಂಡು ಕೆಲಸ ಮಾಡುತ್ತೇನೆ. ಅದಕ್ಕೆ ಪ್ರತಿಪಕ್ಷಗಳ ಸಹಕಾರ ಬೇಕು. ಸ್ವಚ್ಛ ದಕ್ಷ ಆಡಳಿತ ನೀಡುತ್ತೇನೆ, ನಿಮ್ಮ ಸಹಕಾರ ಬಯಸುತ್ತೇನೆ. ಸಾಧನೆಯೇ ಮಾತಾಗ ಬೇಕು, ಆದರೆ ಮಾತೇ ಸಾಧನೆ ಆಗಬಾರದು. ನಾನು ಮೂರು ವರ್ಷ ಹತ್ತು ತಿಂಗಳು ಪ್ರಾಮಾಣಿಕವಾಗಿ ಆಡಳಿತ ನಡೆಸುವೆ. ನಂಬಿಕೆ ದ್ರೋಹ ಮಾಡಲ್ಲ ಎಂದು ಹೇಳಿ ವಿಶ್ವಾಸ ಮತಯಾಚನೆ ನಿರ್ಣಯಕ್ಕೆ ಸಹಕರಿಸಲು ಯಡಿಯೂರಪ್ಪ ಮನವಿ ಮಾಡಿದರು.
ನಂತರ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಸಿದ್ದರಾಮಯ್ಯ ಹಾಗೂ ಮಾತನಾಡಿದರು. ಇದಾದ ಬಳಿಕ ಧ್ವನಿ ಮತದ ಮೂಲಕ ವಿಶ್ವಾಸ ಮತಯಾಚನೆ ನಡೆದು ಯಡಿಯೂರಪ್ಪಗೆ ಗೆಲುವು ದೊರಕಿತು.