ಬೆಂಗಳೂರು: ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಬಿಬಿಎಂಪಿಯ ಹೋಂ ಡೆಲಿವರಿ ಸಹಾಯವಾಣಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೂತನ ಸೇವೆ ಒದಗಿಸುವ ಸಹಾಯವಾಣಿಗೆ ಚಾಲನೆ ನೀಡಿದರು. ಸಹಾಯವಾಣಿಯ ಸಂಖ್ಯೆ 08061914960 ಯನ್ನು ಬಿಡುಗಡೆ ಮಾಡಿ, ರಾಜಧಾನಿ ಜನರು ಈ ಮೂಲಕ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುವಂತೆ ಮನವಿ ಮಾಡಿದರು.
ಬೆಂಗಳೂರು ದಕ್ಷಿಣದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಯೋಜನೆ ಸಫಲವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಯೋಜನೆ ವಿಸ್ತರಿಸಲಾಗಿದೆ. ಜನರು ಮನೆಯಲ್ಲಿಯೇ ಆ್ಯಪ್ ಮೂಲಕ ಹಾಲು, ತರಕಾರಿ, ದಿನಸಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿದರೆ, ಅದನ್ನು ಅವರ ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ 10 ರೂ.ಗಳ ಸೇವಾ ಶುಲ್ಕ ಪಡೆಯಲಾಗುತ್ತದೆ. ಇದಕ್ಕಾಗಿ ಐದು ಸಾವಿರ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಖಾಸಗಿ ಏಜೆನ್ಸಿ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸಲಾಗುತ್ತಿದ್ದು, ಈ ಸೇವೆ ಒದಗಿಸಲು 18 ಸಾವಿರ ವರ್ತಕರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.