ಬೆಂಗಳೂರು: ಯಾರು ಒಳ್ಳೆಯ ಕೆಲಸ ಮಾಡುತ್ತಾರೆ, ಅವರನ್ನು ತಡೆಯುವ ಕೆಲಸ ಹಿಂದೆ ಮಾಡಲಾಯ್ತು. ಅದಕ್ಕೆಲ್ಲ ಅವಕಾಶ ಕೊಡದೆ, ಇಂದು ರಾಜಣ್ಣ ಮತ್ತೆ ಈ ಸ್ಥಾನದಲ್ಲಿ ನಿಂತು ಮಾತನಾಡುತ್ತಿರುವುದು ಸಂತಸದ ವಿಷಯ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಚಾಮರಾಜಪೇಟೆಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನೆರೆ ಪರಿಹಾರ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಪರಿಹಾರ ನಿಧಿಗೆ 5 ಕೋಟಿ ರೂ. ಚೆಕ್ ಹಸ್ತಾಂತರ ಮಾಡಲಾಯಿತು.
ಚೆಕ್ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಸರ್ಕಾರದಿಂದ 590 ಕೋಟಿ ರೂ. ಹಣ ಬಾಕಿ ಇದೆ ಅಂತ ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಹಣಕಾಸಿನ ಅಧಿಕಾರಿಗಳ ಜತೆ ಚರ್ಚೆ ಮಾಡಿ, ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ. ನಾನು ಯಾವುದೇ ತಯಾರಿ ಮಾಡಿಕೊಂಡು ಬಂದಿಲ್ಲ, ಹಾಗಾಗಿ ಇಲ್ಲಿ ಯಾವುದೇ ಘೋಷಣೆ ಮಾಡಲ್ಲ. ಒಳ್ಳೆಯ ಕೆಲಸ ಮಾಡುವವರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯಿತು. ಆದರೆ ರಾಜಣ್ಣ ಅವರು ಮತ್ತೆ ಅಧ್ಯಕ್ಷರಾಗಿ ಈ ಕಾರ್ಯಕ್ರಮ ಮಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಸೂಪರ್ ಸೀಡ್ ಹಿಂಪಡೆದ ಯಡಿಯೂರಪ್ಪರಿಗೆ ಅಭಿನಂದನೆ:
ಇದೇ ವೇಳೆ ಹಿಂದಿನ ಸಿಎಂ ಕುಮಾರಸ್ವಾಮಿ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡಿಸಿಸಿ ಅಧ್ಯಕ್ಷ ಕೆ ಎನ್ ರಾಜಣ್ಣ, ಯಾವುದೋ ಒಬ್ಬ ವ್ಯಕ್ತಿಯ ಕಾರಣದಿಂದ ಕುಮಾರಸ್ವಾಮಿ ನನ್ನನ್ನು ಸೂಪರ್ ಸೀಡ್ ಮಾಡಿದ್ರು, ನಿಮ್ಮ ಉತ್ತಮ ನಿರ್ಧಾರದಿಂದಾಗಿ ನಾನು ಪುನಃ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಆಯಿತು. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸೂಪರ್ ಸೀಡ್ ಹಿಂಪಡೆದರು. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು.
ಘಟನೆ ಹಿನ್ನೆಲೆ:
ಜುಲೈ 20ರಂದು ಹಿಂದಿನ ಮೈತ್ರಿ ಸರ್ಕಾರ ತುಮಕೂರು ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು. ಸೂಪರ್ ಸೀಡ್ ಬಳಿಕ ಸರ್ಕಾರದಿಂದ ಒಂದು ವರ್ಷ ಅವಧಿಗಾಗಿ ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ಆದರೆ ಸೂಪರ್ ಸೀಡ್ ಆದ ಕೆಲವೇ ದಿನಗಳಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷರಾಗಿದ್ದ ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತ್ತೆ ತಮ್ಮ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮೈತ್ರಿ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಬ್ಯಾಂಕ್ ಮೇಲಿದ್ದ ಸೂಪರ್ ಸೀಡ್ ಆದೇಶವನ್ನು ಹಿಂಪಡೆದಿದ್ದರು.
2017 ರ ಸಾಲಮನ್ನಾ ಬಾಕಿಯ 150 ಕೋಟಿ ರೂ ನಮ್ಮ ಬ್ಯಾಂಕ್ಗೆ ಬರಬೇಕಿದೆ. 3 ಲಕ್ಷ 43 ಸಾವಿರ ಕೋಟಿ ರೈತರ ಸಾಲಮನ್ನಾದ 830 ಕೋಟಿ ಹಣ ಬರಬೇಕಾಗಿದೆ. ಸರ್ಕಾರದಿಂದ ಸಕಾಲದಲ್ಲಿ ಹಣ ಬರದೇ ಇದ್ದರೆ ಜಿಲ್ಲಾ ಬ್ಯಾಂಕ್ಗಳಲ್ಲಿ ಹಣಕಾಸಿನ ಕೊರತೆಯಾಗುತ್ತೆ, ರೈತರಿಗೆ ಹಣ ಬಿಡುಗಡೆಗೊಳಿಸುವುದು ಕಷ್ಟವಾಗುತ್ತೆ. ಹೀಗಾಗಿ ಸಕಾಲದಲ್ಲಿ ಸಾಲಮನ್ನಾ ಹಣ ನೀಡುವಂತೆ ಹಾಗೂ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಡೆಪೋಸಿಟ್ ಮಾಡಿರುವ ಹಣವನ್ನು ಸರ್ಕಾರ, ಎ ಕೆಟಗೇರಿಯ ಬ್ಯಾಂಕ್ಗಳಲ್ಲಿ ಡೆಪೋಸಿಟ್ ಮಾಡಲು ಸಿಎಂ ಬಳಿ ರಾಜಣ್ಣ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ್, ಅನರ್ಹ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಸಚಿವ ಹೆಚ್ ವೈ ಮೇಟಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಬಳಿಕ, ಕೇಂದ್ರದಿಂದ ಪರಿಹಾರ ಅಗತ್ಯತೆ ಇಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಸಿಎಂ ಯಡಿಯೂರಪ್ಪ, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.