ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೊಂದು ವಾರ ಲಾಕ್ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಬಂದಿದ್ದು, ಲಾಕ್ಡೌನ್ ಮುಂದುವರೆಸುತ್ತಾ ಹೋದರೆ ಆರ್ಥಿಕ ಚಟುವಟಿಕೆಗೆ ಏನಪ್ಪಾ ಮಾಡೋದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಬೆಳಗಾವಿ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ, ಮೈಸೂರು ಉಸ್ತುವಾರಿ ಎಸ್.ಟಿ ಸೋಮಶೇಖರ್, ತುಮಕೂರು ಉಸ್ತುವಾರಿ ಮಾಧುಸ್ವಾಮಿ, ಶಿವಮೊಗ್ಗ ಉಸ್ತುವಾರಿ ಈಶ್ವರಪ್ಪ ಲಾಕ್ಡೌನ್ ವಿಸ್ತರಣೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಕೂಡ ಕೊರೊನಾ ನಿಯಂತ್ರಣಕ್ಕೆ ಮತ್ತೊಂದು ವಾರ ಲಾಕ್ಡೌನ್ ಮುಂದುವರೆಸುವಂತೆ ಮನವಿ ಮಾಡಿದರು.
ಡಿಸಿಎಂ ಕಾರಜೋಳ ಲಾಕ್ಡೌನ್ ಮುಂದುವರೆಸುವುದು ಒಳ್ಳೆಯದು ಎಂಬ ಹೇಳಿಕೆ ನೀಡುತ್ತಿದ್ದಂತೆ, ಆರ್ಥಿಕ ಚಟುವಟಿಕೆಗೆ ಏನು ಮಾಡುವುದು. ಲಾಕ್ಡೌನ್ ಮುಂದುವರೆಸುತ್ತಾ ಹೋದರೆ ಕಷ್ಟವಾಗಲಿದೆ. ಇದರ ಬದಲು ಹೆಚ್ಚೆಚ್ಚು ಕೊರೊನಾ ಟೆಸ್ಟ್ ಮಾಡಿ. ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್ ಹೊರತುಪಡಿಸಿ, ಇತರ ಎಲ್ಲ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
ಈಗಾಗಲೇ ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪಗೆ ಒಲವಿಲ್ಲ ಎನ್ನುವುದು ಇಂದಿನ ಸಭೆಯಲ್ಲಿ ಸ್ಪಷ್ಟವಾಗಿದೆ. ಹೀಗಾಗಿ, ಕಠಿಣ ನಿಯಮದೊಂದಿಗೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ನನ್ನ ಮೇಲೆ ಆರೋಪ ಸಾಬೀತಾಗದಿದ್ದರೆ ಸಿಂಧೂರಿ ರಾಜೀನಾಮೆ ಕೊಡ್ತಾರಾ?: ಸಾ.ರಾ ಮಹೇಶ್