ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ 3.O ಲಾಕ್ಡೌನ್ ಜಾರಿಯಾದ ಎರಡನೇ ದಿನವಾದ ಇಂದು ಸಂಜೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ.
ಸಂಜೆ 6 ಗಂಟೆಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕೋವಿಡ್ ಉಸ್ತುವಾರಿ ಸಚಿವರಾದ ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಸುಧಾಕರ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭಾಗವಹಿಸಲಿದ್ದು, ಜಗದೀಶ್ ಶೆಟ್ಟರ್ ದೂರವಾಣಿ ಮೂಲಕ ಮಾಹಿತಿ ವಿನಿಮಯ ಮಾಡಲಿದ್ದಾರೆ ಎನ್ನಲಾಗಿದೆ.
ಲಾಕ್ಡೌನ್ 2.O ಪರಿಣಾಮದ ಕುರಿತು ಸಭೆಯಲ್ಲಿ ಅವಲೋಕನ ನಡೆಸಲಿದ್ದು, ಲಾಕ್ಡೌನ್ 3.Oನಿಂದ ಎಷ್ಟರ ಮಟ್ಟಿಗೆ ಕೊರೊನಾ ಹರಡುವಿಕೆಯಲ್ಲಿ ನಿಯಂತ್ರಣ ಸಾಧಿಸಬಹುದು ಎಂದು ಚರ್ಚಿಸಿ ಅಗತ್ಯ ಬಿಗಿ ಕ್ರಮದ ಕುರಿತು ಚರ್ಚೆ ನಡೆಸಲಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ಗಳು, ಐಸಿಯು, ವೆಂಟಿಲೇಟರ್ ಲಭ್ಯತೆ, ಆಕ್ಸಿಜನ್ ಕಾನ್ಸನ್ಟ್ರೇಟರ್ನಿಂದಾಗುತ್ತಿರುವ ಉಪಯೋಗ, ಔಷಧ ಲಭ್ಯತೆ ಕುರಿತು ಚರ್ಚೆ ನಡೆಸಲಾಗುತ್ತದೆ. ಇದೇ ವೇಳೆ ಬ್ಲಾಕ್ ಫಂಗಸ್ ಚಿಕಿತ್ಸೆ ಕುರಿತು ಮಾತುಕತೆ ನಡೆಯಲಿದೆ.
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯತೆ, ಔಷಧಿ ದಾಸ್ತಾನು, ಬ್ಲಾಕ್ ಫಂಗಸ್ ಕಾಣಿಸಿಕೊಳ್ಳಲು ಕಾರಣ ಮತ್ತು ಇದನ್ನು ನಿಯಂತ್ರಿಸಲು ತಜ್ಞರ ಸಮಿತಿ ನೀಡಿದ ಸಲಹೆ ಕುರಿತು ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ. ಈಗಾಗಲೇ ಆಟೋ, ಕ್ಯಾಬ್ ಚಾಲಕರು, ಹೂವಿನ ಬೆಳೆಗಾರರು, ಕಟ್ಟಡ ಕಾರ್ಮಿಕರನ್ನು ಒಳಗೊಂಡಂತೆ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಎರಡನೇ ಪ್ಯಾಕೇಜ್ ಬಗ್ಗೆಯೂ ಸಚಿವರು ಮತ್ತು ಅಧಿಕಾರಿಗಳಿಂದ ಸಿಎಂ ಯಡಿಯೂರಪ್ಪ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಇದನ್ನೂ ಓದಿ: ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ: ಕೆಂಪು ವಲಯದಿಂದ ಕಿತ್ತಳೆಗೆ ತಿರುಗಿದ ತುಮಕೂರು ಜಿಲ್ಲೆ