ಬೆಂಗಳೂರು: ಪ್ರತಿದಿನ ಬೆಂಗಳೂರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಂಗಳೂರಿನ ಸಚಿವರ ಸಭೆ ಕರೆದಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ ಮಹತ್ವದ ಸಭೆ ಕರೆದಿದ್ದು, ಎಂಟು ವಲಯಗಳ ಉಸ್ತುವಾರಿಗಳ ಜೊತೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೂಡ ಭಾಗಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪತ್ತೆ ಹಾಗೂ ಸೋಂಕಿನಿಂದ ಸಂಭವಿಸುತ್ತಿರುವ ಸಾವು ಪ್ರಮಾಣ ಹೆಚ್ಚಳಕ್ಕೆ ಸಿಎಂ ಕಳವಳಗೊಂಡಿದ್ದಾರೆ. ನಗರದಲ್ಲಿ ಕೆಲವೇ ದಿನಗಳಲ್ಲಿ ದೊಡ್ಡ ಪ್ರಮಾಣದ ಕೇಸ್ಗಳು ದಾಖಲಾಗಲಿವೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 65 ಸಾವಿರ ದಾಟಿದೆ. ಕೊರೊನಾ ಪ್ರಮಾಣದಲ್ಲಿ ಇಳಿಕೆ ಆಗದಿದ್ದರೂ ಈಗ ಎಲ್ಲರೂ ಸೋಂಕು ನಿರ್ವಹಣೆ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಬೇಕು ಎಂದು ಸಚಿವರಿಗೆ ಸಿಎಂ ಸೂಚನೆ ಕೊಡಲಿದ್ದಾರೆ.
ಬೆಂಗಳೂರು ಸಚಿವರಲ್ಲಿ ಸಮನ್ವಯದ ಕೊರತೆ ಇರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಇಂದಿನ ಸಭೆಯಲ್ಲಿ ಸಿಎಂ ಚಾಟಿ ಬೀಸಲಿದ್ದಾರೆ ಎನ್ನಲಾಗಿದೆ. ವಲಯಗಳ ಹಂಚಿಕೆ ಬಗ್ಗೆ ಇರುವ ಅಸಮಾಧಾನ ಬಿಟ್ಟು ಕೆಲಸ ಮಾಡಿ ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದಾರೆ. ಇದರ ಜೊತೆಗೆ ಮಳೆಗಾಲ ಕೂಡಾ ಆರಂಭವಾಗಿದ್ದು, ಮಳೆ ನೀರಿನ ಅವಾಂತರಗಳ ನಿಯಂತ್ರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.