ಬೆಂಗಳೂರು: ಸದನದಲ್ಲಿ ವಿಶ್ವಾಸಮತಯಾಚನೆಗೆ ಸಮಯ ಬರುತ್ತಿದ್ದಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಸ್ಪೀಕರ್ ಅವರಿಗೆ ಸಮಯಾವಕಾಶ ನೀಡಿ ಎಂದು ಕೋರುವ ಮೂಲಕ ಇಂದೂ ಕೂಡ ಬಹುಮತ ಸಾಬೀತುಪಡಿಸಲ್ಲ ಎನ್ನುವ ಸಂದೇಶವನ್ನು ತಲುಪಿಸಿದ್ದಾರೆ ಎನ್ನಲಾಗಿದೆ.
ಸಂಜೆ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಹುಮತ ಸಾಬೀತಿಗೆ ಇನ್ನೂ ಎರಡು ದಿನ ಸಮಯ ಕೊಡಿ ಎಂದು ಎರಡನೇ ಬಾರಿ ಮನವಿ ಮಾಡಿದ್ದಾರೆ. ಬೆಳಗ್ಗೆ ಸಿಎಂ ಮನವಿ ತಳ್ಳಿಹಾಕಿದ್ದ ಸ್ಪೀಕರ್ ಇಂದೇ ಬಹುಮತ ಸಾಬೀತಿಗೆ ಸೂಚನೆ ನೀಡಿದ್ದರು. ಹಾಗಾಗಿ ಸಂಜೆ ಮತ್ತೆ ಸ್ಪೀಕರ್ ಭೇಟಿ ಮಾಡಿದ ಸಿಎಂ, ಇಂದು ಬಹುಮತ ಸಾಬೀತು ಮಾಡಲು ಆಗುವುದಿಲ್ಲ ಸಮಯ ಕೊಡಿ ಎಂದು ಮನವಿ ಮಾಡಿದರು.
ಇಂದು ವಿಶ್ವಾಸ ಮತ ಯಾಚನೆ ಮಾಡದೇ ಇದ್ದರೆ ಬಿಜೆಪಿಯವರು ಪ್ರತಿಭಟನೆ ಮಾಡಬಹುದು ಎಂದು ಸಿಎಂ ಬಳಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಆದರೂ ಇಂದು ಯಾವುದೇ ಕಾರಣಕ್ಕೂ ವಿಶ್ವಾಸ ಮತಯಾಚನೆ ಮಾಡಬಾರದು, ಸುಪ್ರೀಂಕೊರ್ಟ್ ತೀರ್ಪು ಹೊರ ಬಂದ ಬಳಿಕ ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಸ್ಪೀಕರ್ಗೆ ಸಿಎಂ ಹೇಳಿ ಕಚೇರಿಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ನಂತರ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನು ಕಚೇರಿಗೆ ಕರೆಸಿಕೊಂಡ ಸ್ಪೀಕರ್ ರಮೇಶ್ ಕುಮಾರ್, ಸಿಎಂ ಮನವಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ಎರಡು ದಿನ ಕಾಲಾವಕಾಶ ಕೋರಿದ್ದು, ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೋರಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ ಕಳೆದ ಸೋಮವಾರದಿಂದಲೂ ನೀವು ಹೇಳಿದಂತೆಯೇ ನಾವು ಎಲ್ಲವನ್ನೂ ಒಪ್ಪಿಕೊಂಡೇ ಬರುತ್ತಿದ್ದೇವೆ. ಇಂದು ಎಲ್ಲವನ್ನೂ ಮುಗಿಸುವ ಭರವಸೆ ನೀವೇ ಕೊಟ್ಟಿದ್ದಿರಿ. ಇದೀಗ ಮತ್ತೆ ಸಮಯ ಕೇಳಿದರೆ ಹೇಗೆ, ಇದಕ್ಕೆ ನಮ್ಮ ಸಮ್ಮತಿ ಇಲ್ಲ. ನೀವು ಏನಾದರೂ ಮಾಡಿಕೊಳ್ಳಿ ಎಂದು ತಮ್ಮ ಅಸಮಾಧಾನ ಹೊರಹಾಕಿ ಸ್ಪೀಕರ್ ಕಚೇರಿಯಿಂದ ಹೊರನಡೆಸಿದ್ದಾರೆ ಎನ್ನಲಾಗಿದೆ.