ಬೆಂಗಳೂರು: ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇಧ ಹೇರುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಸ್ಥಿತಿಗತಿ ಕುರಿತು ತಿಳಿದುಕೊಳ್ಳುವ ಕೆಲಸ ಮಾಡಿದ್ದು, ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡುವ ಸಂಬಂಧ ವಿಡಿಯೋ ಕಾನ್ಫರೆನ್ಸ್ ನಡೆಸಲಾಯಿತು ಎಂದರು.
ಸರ್ಕಾರದ ಮಾರ್ಗಸೂಚಿಯನ್ನು ನಿಗದಿತ ಅವಧಿಯವರೆಗೆ ಅನುಷ್ಠಾನದಲ್ಲಿ ಇರಿಸಿ, ಸೂಕ್ತ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಮಂಡ್ಯ, ಕೊಡಗು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ನಿಷೇಧಕ್ಕೆ ಸೂಚಿಸಿದ್ದು, ಹೋಂ ಸ್ಟೇಗಳ ಬಗ್ಗೆ ವಿಶೇಷ ನಿಗಾ ಇಡಲು ಸೂಚನೆ ನೀಡಿದ್ದೇವೆ. ಹೊರ ದೇಶದಿಂದ ಬಂದವರನ್ನು ನಿವಾಸದಲ್ಲಿ ಪ್ರತ್ಯೇಕವಾಗಿ ಇರಿಸಿರುವ ಮಾಹಿತಿ ಪಡೆಯಲಾಗಿದೆ. ವಿದೇಶ ಪ್ರವಾಸ ಮಾಡಿದವರ ಮೇಲೆ ನಿಗಾ ಇರಿಸಲು ಸೂಚಿಸಿದ್ದು, ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ನಿಗಾ ಇರಿಸಲು ಸೂಚಿಸಲಾಗಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಡೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಎಲ್ಲಾ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರುಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜಾತ್ರೆ, ಸಂತೆ ನಿಷೇಧಕ್ಕೆ ಸೂಚಿಸಿದ್ದು, ದೇವಸ್ಥಾನಗಳಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚುವರಿ ವೆಂಟಿಲೇಟರ್ ಬೇಡಿಕೆ ಬಂದಿದ್ದು, ಅದನ್ನು ಕಲ್ಪಿಸುತ್ತೇವೆ ಎಂದರು.
ಜನಜೀವನಕ್ಕೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಸೂಪರ್ ಮಾರ್ಕೆಟ್ ತೆಗೆಯಲು ಅವಕಾಶ ನೀಡಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ರಜೆ ದಿನದಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿ ಹಾಜರಿರಬೇಕು ಎಂದರು.