ಬೆಂಗಳೂರು : ಮಧ್ಯಾಹ್ನಕ್ಕೆ ನಿಗದಿಯಾಗಿದ್ದ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಡಳಿತಗಳೊಂದಿಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM basavaraja bommai meeting) ಅವರ ವಿಡಿಯೋ ಸಂವಾದವು ನೀತಿ ಸಂಹಿತೆ ಕಾರಣದಿಂದ ಮುಂದೂಡಿಕೆಯಾದ ಘಟನೆ ಇಂದು ಸಂಜೆ ನಡೆಯಿತು.
ಗೃಹ ಕಚೇರಿ ಕೃಷ್ಣಾದಿಂದ ಸಿಎಂ ಬೊಮ್ಮಾಯಿ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಂದ ಮಳೆ ಹಾನಿ ಕುರಿತು ಸಿಎಂ ಮಾಹಿತಿ ಪಡೆದರು.
ಮಳೆ ಪ್ರಮಾಣ, ಹಾನಿ ಕುರಿತು ಸಿಎಂ ಜಿಲ್ಲಾವಾರು ಮಾಹಿತಿ ಪಡೆದರು. ತುರ್ತು ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕುಸಿಯುವ ಸ್ಥಿತಿಯಲ್ಲಿರುವ ಮನೆಗಳಲ್ಲಿರುವ ಕುಟಂಬಗಳ ಸ್ಥಳಾಂತರ ಮಾಡಬೇಕು. ತುರ್ತು ಕಾರ್ಯಾಚರಣೆಗೆ ಸದಾ ಸನ್ನದ್ಧವಾಗಿರಬೇಕು ಎಂದು ಸೂಚನೆ ನೀಡಿದ್ದು, ಬೆಳೆ ಹಾನಿ ಕುರಿತು ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಭೆ ನಿಗಿದಿಯಾಗಿತ್ತಾದರೂ ಚುನಾವಣಾ ಆಯೋಗದ ಅನುಮತಿ ಪಡೆಯದ ಕಾರಣಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಮಧ್ಯಾಹ್ನವೇ ಸರ್ಕಾರದಿಂದ ಚುನಾವಣಾ ಆಯೋಗಕ್ಕೆ ಅನುಮತಿ ಕೋರಿ ಪತ್ರ ಕಳುಹಿಸಲಾಗಿದೆ. ಅನುಮತಿ ಸಿಕ್ಕ ಹಿನ್ನೆಲೆ ಸಂಜೆ 4 ಗಂಟೆಗೆ ಸಭೆ ನಡೆಸಲಾಯಿತು.
ಇದನ್ನೂ ಓದಿ: '40 ಪರ್ಸೆಂಟ್ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ'
ವಿಡಿಯೋ ಸಂವಾದದಲ್ಲಿ ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ. ಸೋಮಣ್ಣ, ತೋಟಗಾರಿಕೆ ಸಚಿವ ಮುನಿರತ್ನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ವಂದಿತಾ ಶರ್ಮ, ಗೃಹ ಮತ್ತು ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.