ಬೆಂಗಳೂರು: ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ವರ್ಷ ತುಂಬುತ್ತಿರುವ ಶುಭ ಮುಹೂರ್ತದಲ್ಲಿಯೇ ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳ ಭಾಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ಬಳಿಕ ಸಿಎಂ ಸ್ಥಾನಕ್ಕೆ ವಿದಾಯ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಜುಲೈ 26ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಆಗಲಿದೆ. ಕಳೆದ 2019ರ ಜುಲೈ 26 ರಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಜುಲೈ 26ರಂದೇ. ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ಈ ಹಿನ್ನೆಲೆಯಲ್ಲಿ ಜುಲೈ 25ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದಾರೆ. ಅಂದು ಬಿಜೆಪಿಯ ಎಲ್ಲಾ ಶಾಸಕರು ಮತ್ತು ಸಚಿವರಿಗೆ ಔತಣಕೂಟ ಸಹ ಏರ್ಪಡಿಸಲಾಗಿದ್ದು, ಈ ಸಭೆಯಲ್ಲಿ ಎರಡು ವರ್ಷ ಆಡಳಿತ ನಡೆಸಲು ಸಹಕಾರ ನೀಡಿದ ಶಾಸಕರಿಗೆ, ಸಚಿವರಿಗೆ ಧನ್ಯವಾದಗಳನ್ನು ಸಮರ್ಪಿಸಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಬೆಂಬಲಿಗರ ಪಡೆಯಿಲ್ಲ, ಆಪ್ತರ ಸುಳಿವಿಲ್ಲ: ಒಬ್ಬಂಟಿಯಾಗಿ ಕಾಲ ಕಳೆದ ಸಿಎಂ!
ಮರುದಿನ ಜುಲೈ 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ತಮ್ಮ ಸರ್ಕಾರದ ಸಾಧನಾ ಸಮಾವೇಶವನ್ನು ಸಹ ಸಿಎಂ ಯಡಿಯೂರಪ್ಪನವರು ಕರೆದಿದ್ದಾರೆ. ಎರಡು ವರ್ಷದ ಸರ್ಕಾರದ ಸಾಧನೆಗಳ ಬಗ್ಗೆ ಈ ಸಭೆಯಲ್ಲಿ ಭಾಷಣ ಮಾಡಿ, ವಿದಾಯದ ನುಡಿಗಳನ್ನೂ ಆಡಲಿದ್ದಾರೆ ಎಂಬ ಮಾತುಗಳು ಬಿಜೆಪಿಯ ಪಡಸಾಲೆಯಲ್ಲಿ ಕೇಳಿಬರತೊಡಗಿವೆ.
ರಾಜೀನಾಮೆಗೂ ಮುನ್ನ ಶಿವಮೊಗ್ಗ ಪ್ರವಾಸ
ಮುಂದಿನ ವಾರ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವ ಮುನ್ನ ಸಿಎಂ ಯಡಿಯೂರಪ್ಪನವರು ತವರು ಜಿಲ್ಲೆ ಶಿವಮೊಗ್ಗ ಹಾಗೂ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಪ್ರವಾಸ ಕೈಗೊಂಡು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಜು.22ರಂದು ಕ್ಯಾಬಿನೆಟ್ ಮೀಟಿಂಗ್
ಸಿಎಂ ಹುದ್ದೆಯ ಪದತ್ಯಾಗ ನಿರ್ಣಯ ಮಾಡುವ ನಿರ್ಧಾರಕ್ಕೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಕೆಲವೊಂದು ಮಹತ್ವದ ತೀರ್ಮಾನ ತಗೆದುಕೊಳ್ಳುವ ಉದ್ದೇಶದಿಂದ ಇದೇ 22ರಂದು ಸಂಜೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ಯಡಿಯೂರಪ್ಪನವರು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.