ಬೆಂಗಳೂರು: 'ಬೆಂಗಳೂರು ಲಾಕ್‌ಡೌನ್' ಆಗೋದು ಬಿಡುವುದು ಬೆಂಗಳೂರಿಗರ ಕೈಯಲ್ಲಿದೆ ಎಂದು ಸಿಎಂ ಯಡಿಯೂರಪ್ಪ ಸೂಚ್ಯವಾಗಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್ ಪಿಡುಗು ಜಾಸ್ತಿ ಆಗುತ್ತಿದೆ. ಇದನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಏರಿಯಾಗಳನ್ನು ಸೀಲ್ಡೌನ್ ಮಾಡಲಾಗಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಲಾಕ್‌ಡೌನ್ ಆಗಬೇಕೋ, ಬೇಡವೋ ಅನ್ನೋದು ಬೆಂಗಳೂರಿಗರ ಮೇಲಿದೆ. ಸಂಪೂರ್ಣ ಲಾಕ್‌ಡೌನ್ ಆಗಬಾರದು ಎಂದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತ ಜನರು ಕೊರೊನಾ ಹೋರಾಟಕ್ಕೆ ಸಹಕರಿಸಬೇಕಿದೆ ಎಂದು ತಿಳಿಸಿದರು.
ನಾಳೆ ಸರ್ವಪಕ್ಷ ಸಭೆ: ಇಂದು ಮಧ್ಯಾಹ್ನ ಒಂದು ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಅಧಿಕಾರಿಗಳ ಸಭೆ ಕರೆದಿದ್ದೇನೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸರ್ವ ಪಕ್ಷದ ಶಾಸಕರ ಸಭೆ ಕರೆದಿದ್ದೇನೆ. ಕೋವಿಡ್ ತಡೆಯಲು ಬೇಕಾದ ಇನ್ನಷ್ಟು ಕ್ರಮಗಳ ಕುರಿತು ಚರ್ಚಿಸುತ್ತೇವೆ ಎಂದು ಬಿಎಸ್ವೈ ಹೇಳಿದರು.