ಬೆಂಗಳೂರು: ರಾಜಸ್ಥಾನದ ಉದಯ್ಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್.ಟಿ ನಗರದ ತಮ್ಮ ಖಾಸಗಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉದಯ್ಪುರದಲ್ಲಿ ನಡೆದಿರುವ ಪ್ರಕರಣ ಅಮಾನವೀಯ ಮತ್ತು ಅತ್ಯಂತ ಹೇಯ ಕೃತ್ಯವಾಗಿದೆ. ಇದು ಭಯೋತ್ಪಾದಕರ ಚಟುವಟಿಕೆಯಾಗಿದ್ದು, ಅದರ ಹಿಂದೆ ಬಹಳ ದೊಡ್ಡ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಮತ್ತು ಕೃತ್ಯದಲ್ಲಿ ಭಾಗಿಯಾದವರನ್ನು ಗಲ್ಲಿಗೇರಿಸಬೇಕು ಎಂದು ಹೇಳುವ ಮೂಲಕ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಉದಯ್ಪುರ ಘಟನೆ ಕುರಿತು ರಾಜಸ್ಥಾನ ಸರ್ಕಾರ ಕೂಡಲೇ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಬೇಕು. ಅದರ ಸಂಪೂರ್ಣ ತನಿಖೆ ಮಾಡಬೇಕು. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಹಂತಕರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳು ಎಲ್ಲವೂ ಇವೆ. ಹೀಗಾಗಿ ಸಮಗ್ರ ತನಿಖೆಯ ಅಗತ್ಯವಿದೆ ಎಂದರು.
ಓದಿ: 'ಹಿಂದೂಗಳ ಜೀವ ಮುಖ್ಯ': ಉದಯಪುರ ವ್ಯಕ್ತಿಯ ಶಿರಚ್ಛೇದ ಖಂಡಿಸಿದ ಖ್ಯಾತ ನಟಿ ಪ್ರಣಿತಾ
ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಸರಳ ಬಹಮತ ಸಿಗಲಿದೆ ಎನ್ನುವ ವರದಿ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಆಂತರಿಕ ಸಮೀಕ್ಷೆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲು ಸಾಧ್ಯವೇ?. ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದೇ ಹೇಳಬೇಕು ಎಂದು ವ್ಯಂಗ್ಯವಾಡಿದರು.
ಶೇ.40 ರ ಕಮೀಷನ್ ಆರೋಪ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯದ ಗುತ್ತಿಗೆದಾರರ ಸಂಘಕ್ಕೆ ಸೂಚನೆ ನೀಡಿರುವ ಮಾಹಿತಿ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಕೇಳಿರುವ ಮಾಹಿತಿಯನ್ನು ಅವರು ಕೊಡಲಿ. ತೊಂದರೆ ಏನಿಲ್ಲ.. ಆದರೆ ನಮಗೇನೂ ಈ ಬಗ್ಗೆ ಮಾಹಿತಿ ಬಂದಿಲ್ಲ. ಅವರ ಸಂಘಕ್ಕೆ ಬಂದಿದ್ದರೆ ಅವರ ಬಳಿ ಇರುವ ಮಾಹಿತಿಯನ್ನ ಕೊಡಲಿ ಎಂದು ಸಿಎಂ ಹೇಳಿದರು.
ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ವಿಸ್ತರಣೆ ಕುರಿತು ಆಗಸ್ಟ್ ತಿಂಗಳಿನಲ್ಲಿ ಕೇಂದ್ರದ ಹಣಕಾಸು ಸಚಿವರು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಚಂಡೀಗಢದಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕಾನೂನು ತೊಡಕು ನಿವಾರಣೆ ಮಾಡುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.