ಬೆಂಗಳೂರು: ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿರುವುದು ಕಾನೂನುಬಾಹಿರ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ನಮ್ಮ ನೀರಿನ ಹಕ್ಕಿನ ಮೇಲೆ ಅವರು ದಬ್ಬಾಳಿಕೆ ಮಾಡುವ ಹುನ್ನಾರ ನಡೆಸಿದ್ದು, ಅವರ ಬೇಡಿಕೆಯನ್ನು ಕೇಂದ್ರ ಪರಿಗಣಿಸಬಾರದು. ನಮಗೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಕಾವೇರಿ ನದಿ ನಿರ್ವಹಣಾ ಮಂಡಳಿಯಲ್ಲಿ ಡಿಪಿಆರ್ ಅಪ್ರೂಪ್ ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಅದೇ ರೀತಿ, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ಹಲವಾರು ಸಭೆ ಆಗಿವೆ, ಸದ್ಯದಲ್ಲೇ ಅಂತಿಮ ಸಭೆ ಬರುತ್ತದೆ.
ಈಗ ತಮಿಳುನಾಡು ಕ್ಯಾತೆ ತೆಗೆದಿದೆ. ಪ್ರಧಾನಿಗೆ ಪತ್ರ ಬರೆದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆ ಪತ್ರವನ್ನು ತರಿಸಿಕೊಳ್ಳುತ್ತೇನೆ. ಅವರ ಬೇಡಿಕೆ ಕಾನೂನುಬಾಹಿರ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಮತ್ತು ನಮ್ಮ ನೀರಿನ ಹಕ್ಕಿನ ಮೇಲೆ ಅವರು ದಬ್ಬಾಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡಿನ ನೀರಿನ ಹಕ್ಕಿನ ಮೇಲೆ ನಾವು ಈ ಯೋಜನೆಯನ್ನ ಮಾಡಿಲ್ಲ. ನಮ್ಮ ಪಾಲಿನ ನೀರಿನ ಹಕ್ಕಿನ ಅಡಿ ನಾವು ಮೇಕೆದಾಟು ಮಾಡುತ್ತಿದ್ದೇವೆ, ನಮ್ಮ ರಾಜ್ಯದಲ್ಲಿಯೇ ಮಾಡುತ್ತಿದ್ದೇವೆ ಮತ್ತು ಈಗಾಗಲೇ ಸಾಕಷ್ಟು ಪ್ರಕ್ರಿಯೆ ಮುಗಿದು ಅಂತಿಮ ಹಂತಕ್ಕೆ ಬಂದಿದೆ. 15 ಸಭೆಗಳು ನಡೆದಿವೆ. ಇಲ್ಲಿಯವರೆಗೂ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈಗ ರಾಜಕೀಯ ಗಿಮಿಕ್ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಾವೇರಿ ವಿಚಾರದಲ್ಲಿ ತಮಿಳುನಾಡಿನಲ್ಲಿ ಯಾವಾಗಲೂ ರಾಜಕೀಯ ಸ್ಟಂಟ್ ಮಾಡುತ್ತಾರೆ. ಅದರ ಮೇಲೆ ರಾಜಕೀಯ ಮಾಡುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕೂಡ ಅದರ ಒಂದು ಭಾಗವೇ ಆಗಿದೆ. ಹಾಗಾಗಿ ಅವರ ಬೇಡಿಕೆ ಕಾನೂನು ಬಾಹಿರ, ಕೇಂದ್ರ ಇದನ್ನ ಪರಿಗಣಿಸಬಾರದು. ನಮಗೆ ವಿಶ್ವಾಸವಿದೆ ಈ ವಿಚಾರದಲ್ಲಿ ನಮಗೆ ನ್ಯಾಯ ಸಿಗಲಿದೆ ಎಂದರು. ಜೂನ್ 16 ರಂದು ಮೇಕೆದಾಟು ಯೋಜನೆ ಕುರಿತು ಸಭೆ ನಡೆಯಲಿದೆ, ಅದಕ್ಕೆ ನಮ್ಮ ಅಧಿಕಾರಿಗಳು ಹೋಗಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.
(ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: 10 ತಾಸು ರಾಹುಲ್ಗೆ ಇಡಿ ಡ್ರಿಲ್... ಇಂದೂ ವಿಚಾರಣೆ ಸಾಧ್ಯತೆ)