ಬೆಂಗಳೂರು: ವಿಧಾನಸಭೆ ಕಲಾಪದ ಕೊನೆಯ ದಿನವಾದ ಇಂದು ಆಡಳಿತ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಭಾರಿ ವಾಗ್ವಾದವಾಗಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾಗ್ಪುರ ಶಿಕ್ಷಣ ನೀತಿ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಆರ್‌ಎಸ್‌ಎಸ್ ಶಿಕ್ಷಣ ನೀತಿ ಅಂತಲೇ ಕರೆಯಿರಿ ಚಿಂತೆ ಇಲ್ಲ ಎಂದು ತೀಕ್ಷಣವಾಗಿ ಹೇಳಿದ್ದಾರೆ.
ಇದು ನಾಗಪುರ ಎಜುಕೇಷನ್ ಪಾಲಿಸಿ, ಸಿಟಿ ರವಿ ಎಜುಕೇಷನ್ ಪಾಲಿಸಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು. ಇದು ಆರ್‌ಎಸ್‌ಎಸ್ ಅಜೆಂಡಾವಾಗಿದೆ. ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಕಾಂಗ್ರೆಸ್ ಸದಸ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗದ್ದಲದ ಮಧ್ಯೆ ಸಿಎಂ ಪ್ರತಿಕ್ರಿಯಿಸಿದ ಸಿಎಂ, ರಾಷ್ಟ್ರೀಯ ಶಿಕ್ಷಣ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಲು, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ನೀತಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಹೌದು ಆರ್‌ಎಸ್‌ಎಸ್ ಪಾಲಿಸಿ.. ಅದರಲ್ಲಿ ತಪ್ಪೇನು?
ಆರ್‌ಎಸ್‌ಎಸ್ ಎಜುಕೇಷನ್ ಪಾಲಿಸಿ ಎಂದೇ ಕರೆಯಿರಿ ನಾವೇನು ಚಿಂತೆ ಮಾಡಲ್ಲ. ಬದಲಾವಣೆಗೆ ನೀವು ತಯಾರಿಲ್ಲ. ಇದೊಂದು ಉತ್ತಮ ನೀತಿಯಾಗಿದೆ. ಭಾರತೀಯರಿಗಾಗಿ, ಭಾರತೀಯರಿಗೋಸ್ಕರ, ಭಾರತೀಯರ ಭವಿಷ್ಯಕ್ಕಾಗಿ, ಭಾರತೀಯ ಮಕ್ಕಳ ಭವಿಷ್ಯಕ್ಕಾಗಿ ಮಾಡಿದ ನೀತಿ ಇದಾಗಿದೆ. ಕಾಂಗ್ರೆಸ್‌ನದ್ದು ವಿದೇಶಿ ಪ್ರೇರಿತ ಶಿಕ್ಷಣ ನೀತಿಯಾಗಿದೆ, ಕಾಂಗ್ರೆಸ್‌ನದ್ದು ಗುಲಾಮಗಿರಿಯ ಶಿಕ್ಷಣ ನೀತಿಯಾಗಿದೆ ಎಂದು ಕಿಡಿ ಕಾರಿದರು.
ಇದೇ ವೇಳೆ ಸ್ಪೀಕರ್, RSS ನೀತಿ ಉತ್ತಮ ಶಿಕ್ಷಣ ನೀತಿಯಾದರೆ ಅದನ್ನು ಜಾರಿಗೊಳಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಅದು ನಿಮ್ಮ ಪೂರ್ವಾಶ್ರಮವಲ್ಲ ಎಂದು ಕೇಳಿದಾಗ, ಹೌದು ಆರ್‌ಎಸ್‌ಎಸ್ ನನ್ನ ಪೂರ್ವಾಶ್ರಮ ಎಂದರು.
ಪರಸ್ಪರ ಕೂಗಾಟ... ಘೋಷಣೆ
ಇಟಾಲಿಯನ್ ಪಾಲಿಸಿ ನಮಗೆ ಬೇಡ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ, ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಗದ್ದಲ ಉಂಟಾಯಿತು. ಬಿಜೆಪಿ ಕಾಂಗ್ರೆಸ್ ಸದಸ್ಯರು ಪರಸ್ಪರ ಘೋಷಣೆ ಕೂಗಿದರು. ಬಿಜೆಪಿಯವರು ಆರ್‌ಎಸ್‌ಎಸ್ ಜಿಂದಾಬಾದ್, ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಆರ್‌ಎಸ್‌ಎಸ್ ಕೈಗೊಂಬೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.