ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವು ಕಡೆ ವ್ಯಾಪಕ ಮಳೆಯಾಗುತ್ತಿದೆ. ಮಳೆ ಅನಾಹುತ ಹಾಗೂ ಮಂಕಿಪಾಕ್ಸ್ ಆತಂಕದ ಕುರಿತು ನಾಳೆ ಅಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ ನಗರ ನಿವಾಸದಲ್ಲಿ ಜಿಲ್ಲಾ ಪ್ರವಾಸಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು ಕೊಪ್ಪಳ ಪ್ರವಾಸ ಮಾಡುತ್ತಿದ್ದೇನೆ. ಅಂಜನಾದ್ರಿ ಬೆಟ್ಡದ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇನೆ. ಇಂದು ಸಮಗ್ರ ಅಭಿವೃದ್ಧಿ ಸ್ಥಳ ವೀಕ್ಷಣೆ ಮಾಡಿ ಬರುತ್ತೇನೆ. ಅಲ್ಲಿನ ಭೂಮಿ ನೋಡಿ ಕಾಮಗಾರಿ ಶೀಘ್ರವೇ ಆರಂಭಿಸುವ ತೀರ್ಮಾನ ಮಾಡುತ್ತೇವೆ ಎಂದರು.
ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ಹಿನ್ನೆಲೆ ಮಳೆ ಹಾನಿ ಕುರಿತು ನಾಳೆ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಮಳೆ ನಷ್ಟದ ಬಗ್ಗೆ ಚರ್ಚಿಸಿ ಪರಿಹಾರದ ಬಗ್ಗೆ ಸೂಚನೆ ನೀಡುತ್ತೇನೆ ಎಂದರು.
ಕೇರಳದಲ್ಲಿ ಮಂಕಿಪಾಕ್ಸ್ಗೆ ಮೊದಲ ಬಲಿಯಾಗಿದೆ. ಇದರಿಂದ ರಾಜ್ಯದ ಗಡಿ ಜಿಲ್ಲೆ ಮಂಗಳೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಮಂಕಿಪಾಕ್ಸ್ ಆತಂಕ ಕುರಿತು ನಾಳೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಕಾಯಿಲೆ ಬಗ್ಗೆ ಮಾಹಿತಿ ಪಡೆದು, ಯಾವೆಲ್ಲ ಕ್ರಮ ತಗೆದುಕೊಳ್ಳಬೇಕು ಅಂತಾ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದರು.
ಆ. 3 ರಂದು ಸಿದ್ದರಾಮೋತ್ಸವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಸಿದ್ದರಾಮೋತ್ಸವ ಅವರದ್ದು. ಅದು ಈಗಾಗಲೇ ಗೊತ್ತಿರುವ ವಿಚಾರ. ಆದರೆ, ನಾವು ಸಿದ್ದರಾಮ ದೇವರನ್ನು ಪೂಜೆ ಮಾಡುವವರು. ಹೀಗಾಗಿ ನಾನು ಇಂದು ದಾವಣಗೆರೆಗೆ ಸಿದ್ದರಾಮನ ದೇವರ ಉತ್ಸವಕ್ಕೆ ಹೋಗುತ್ತಿದ್ದೇನೆ. ಆದರೆ, ಆ ಸಿದ್ದರಾಮೋತ್ಸವಕ್ಕಲ್ಲ ಎಂದರು.
ನಾವು ಜನೋತ್ಸವ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಪ್ರಾದೇಶಿಕ ಮತ್ತು ಜಿಲ್ಲಾ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ನಮ್ಮ ಪಕ್ಷದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದರು.
ಎನ್ಐಎಗೆ ಕೇಸ್ ಹಸ್ತಾಂತರ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರ ಕೊಲೆಹಂತಕರ ಪತ್ತೆ ಆಗುತ್ತದೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡುತ್ತೇವೆ. ತಾಂತ್ರಿಕ ಮತ್ತು ಪೇಪರ್ ವರ್ಕ್ ನಡೆಯುತ್ತಿದೆ. ಆದಷ್ಟು ಬೇಗ ಪ್ರಕರಣವನ್ನು ವರ್ಗಾವಣೆ ಮಾಡುತ್ತೇವೆ.
ಈಗಾಗಲೇ ಎನ್ಐಎಗೆ ಕೇಸ್ ಬಗ್ಗೆ ಅನೌಪಚಾರಿಕವಾಗಿ ತಿಳಿಸಿದ್ದೇವೆ. ಕೆಲವು ಎನ್ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ ಎಂದರು. ಕೊಲೆಯಾದ ಫಾಜಿಲ್ ಹಾಗೂ ಮಸೂದ್ ಮನೆಗೆ ಸಿಎಂ ಭೇಟಿ ಕೊಡದ ಬಗ್ಗೆ ಕಾಂಗ್ರೆಸ್ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಬರುವ ದಿನಗಳಲ್ಲಿ ಭೇಟಿ ಕೊಡುತ್ತೇನೆ ಎಂದರು.
ಇದನ್ನೂ ಓದಿ: ಭಾರತದಲ್ಲಿ ಶಂಕಿತ ಮಂಕಿಪಾಕ್ಸ್ಗೆ ಮೊದಲ ಬಲಿ: ಯುಎಇಯಿಂದ ಕೇರಳಕ್ಕೆ ಬಂದಿದ್ದ ಯುವಕ ಸಾವು