ಬೆಂಗಳೂರು: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿನ ಆಸೆ ಚಿಗುರೊಡೆಯುವಂತೆ ಮಾಡಿದೆ. ಮತ್ತೆ ವರಿಷ್ಠರ ನಿರ್ಧಾರದತ್ತ ದೃಷ್ಟಿ ಹಾಯಿಸುವಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾಲಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿ ಜೊತೆಗೆ ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಕೆಲ ಹಿರಿಯರಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕಿ ಕ್ಯಾಬಿನೆಟ್ ರಚನೆ ಮಾಡಲು ಸಿದ್ಧತೆ ನಡೆದಿದೆ. ಸಂಘ ಪರಿವಾರದ ಅಂಗಳ, ಪಕ್ಷದ ಕಚೇರಿ, ರೇಸ್ ಕೋರ್ಸ್ ನಿವಾಸ, ಕಾವೇರಿ ನಿವಾಸದಲ್ಲಿ ಸಂಪುಟ ಪುನಾರಚನೆಯ ಸರಣಿ ಚರ್ಚೆಗಳು ನಡೆದಿವೆಯಾದರೂ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣಕ್ಕೆ ಆಕಾಂಕ್ಷಿಗಳಿಗೆ ಪದೇ ಪದೇ ನಿರಾಸೆಯಾಗುತ್ತಲೇ ಬಂದಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದ ನಂತರ ರಚನೆಯಾದ ಕ್ಯಾಬಿನೆಟ್ನಲ್ಲಿ ನಾಲ್ಕು ಸ್ಥಾನ ಖಾಲಿ ಉಳಿದಿದ್ದು, ಅವುಗಳ ಭರ್ತಿ ಜೊತೆಗೆ ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆಹಾಕುವ ಚರ್ಚೆ ಬಗ್ಗೆ ನಡೆದಿದೆ. ಉಪ ಚುನಾವಣೆ ನಂತರ ಸಂಪುಟ ಪುನಾರಚನೆ ಎಂದು ದೆಹಲಿಯಿಂದ ವಾಪಸಾಗಿದ್ದ ಬೊಮ್ಮಾಯಿ ನಂತರ ಪಟ್ಟಿ ಹಿಡಿದು ದೆಹಲಿಗೆ ಭೇಟಿ ನೀಡಿದಾಗಲೆಲ್ಲಾ ದೀಪಾವಳಿ ಮುಗಿಯಲಿ, ಹೊಸ ವರ್ಷಕ್ಕೆ ಮಾಡೋಣ, ಸಂಕ್ರಾಂತಿಯಾಗಲಿ, ಪಂಚರಾಜ್ಯ ಚುನಾವಣೆ ಮುಗಿಯಲಿ, ಬಜೆಟ್ ಅಧಿವೇಶನದವರೆಗೂ ಬದಲಾವಣೆ ಬೇಡ, ಯುಗಾದಿಗೆ ಮಾಡೋಣ ಎನ್ನುವ ಸಿದ್ಧ ಉತ್ತರ ಸಿಗುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬೊಮ್ಮಾಯಿ ರಾಜ್ಯಕ್ಕೆ ಮರಳುತ್ತಿದ್ದರು.
ಇದೀಗ ಪರಿಸ್ಥಿತಿ ಬೇರೆಯೇ ಇದೆ. ಚುನಾವಣೆಗೆ ವರ್ಷವಷ್ಟೇ ಬಾಕಿ ಇದೆ. ಈಗ ಸಂಪುಟ ವಿಸ್ತರಣೆ ಮಾಡದೇ ಇದ್ದರೆ ನಂತರ ಯಾವುದೇ ಉಪಯೋಗ ಇರುವುದಿಲ್ಲ. ಅಲ್ಲದೇ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಖುದ್ದು ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಸುದೀರ್ಘ ಒಂದೂವರೆ ಗಂಟೆ ಕಾಲ ಕೋರ್ ಕಮಿಟಿ ಸಭೆ ನಡೆಸಿ ವಿಸ್ತೃತವಾದ ಚರ್ಚೆ ನಡೆಸಿದ್ದರು.
ಏಪ್ರಿಲ್ 16 ರಂದು ಹೊಸಪೇಟೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆ ನಂತರ ಸಚಿವ ಸಂಪುಟ ಪುನಾರಚನೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಈ ಸಂಬಂಧ ಈಗಿನ ದೆಹಲಿ ಪ್ರವಾಸದಲ್ಲಿಯೇ ಬಹುತೇಕ ಎಲ್ಲ ನಿರ್ಧಾರಗಳು ಆಗಲಿವೆ ಎನ್ನುವ ಮಾತುಗಳು ಸಿಎಂ ಅಪ್ತ ವಲಯದಿಂದ ಕೇಳಿ ಬಂದಿವೆ.
ಮುಖ್ಯಮಂತ್ರಿ ದೆಹಲಿಗೆ ತೆರಳುವ ಸಿದ್ಧತೆ ನಡೆಸುತ್ತಿದ್ದಂತೆ ಸದ್ದಿಲ್ಲದೇ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಕೆಲವರು ದೆಹಲಿಗೂ ತೆರಳಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಬಹಿರಂಗವಾಗಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿ ದೆಹಲಿಯಲ್ಲಿ ಬೀಡುಬಿಟ್ಟಿರುವುದು ಲಾಬಿ ನಡೆಯುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಎ ರಾಮದಾಸ್, ಅಪ್ಪಚ್ಚು ರಂಜನ್, ಶಿವರಾಜ್ ಪಾಟೀಲ್, ಎಂ.ಪಿ. ರೇಣುಕಾಚಾರ್ಯ, ಅರವಿಂದ ಬೆಲ್ಲದ್, ಸೋಮಶೇಖರ ರೆಡ್ಡಿ, ಎಂಎಲ್ಸಿ ಭಾರತಿ ಶೆಟ್ಟಿ, ಸಿ.ಪಿ. ಯೋಗೇಶ್ವರ್, ಸೋಮಶೇಖರ್ ರೆಡ್ಡಿ, ತಿಪ್ಪಾರೆಡ್ಡಿ, ಪೂರ್ಣಿಮಾ, ಪರಣ್ಣ ಮುನವಳ್ಳಿ ಸೇರಿದಂತೆ ಕೆಲ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ರೀ ಎಂಟ್ರಿಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.
ನಿಗಮ-ಮಂಡಳಿ ನೇಮಕ: ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ನೇಮಕಾತಿ ಬಾಕಿ ಉಳಿದಿದೆ. ಪಕ್ಷಕ್ಕೆ ಚುನಾವಣೆ ವೇಳೆ ಅನುಕೂಲಕರ ವಾತಾವರಣ ಸೃಷ್ಟಿಗೆ ಪೂರಕವಾಗಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಕುರಿತು ಚರ್ಚಿಸಲಾಗುತ್ತದೆ. ಈಗಾಗಲೇ ನಿಗಮ ಮಂಡಳಿಗಳ ನೇಮಕಾತಿಗೆ ಪಟ್ಟಿ ರಾಜ್ಯ ಮಟ್ಟದಲ್ಲಿ ಅಂತಿಮಗೊಂಡಿದೆ. ಕಟೀಲ್ ನೇತೃತ್ವದಲ್ಲಿ, ಸಿಎಂ ನೇತೃತ್ವದಲ್ಲಿ ಸಭೆ ನಡೆದು ನಂತರ ಕಟೀಲ್, ಬೊಮ್ಮಾಯಿ ಇಬ್ಬರೂ ಕುಳಿತು ಮಾತುಕತೆ ನಡೆಸಿ ಪ್ರತ್ಯೇಕ ಪಟ್ಟಿಯನ್ನು ತಯಾರಿಸಲಾಗಿದೆ. ಈ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವೂ ಆಗಿದ್ದು, ನಾಳೆ ವರಿಷ್ಠರ ಭೇಟಿ ವೇಳೆ ಇದಕ್ಕೂ ಅಂತಿಮ ಸ್ವರೂಪ ಬರಲಿದೆ ಎಂದು ಹೇಳಲಾಗ್ತಿದೆ.
ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿಗೆ ಸಿಎಂ ಸಮಯಾವಕಾಶ ಕೇಳಿದ್ದಾರೆ. ಉಭಯ ನಾಯಕರ ಜೊತೆ ಚರ್ಚಿಸಿ ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು ಅಥವಾ ಪುನರ್ರಚನೆ ಮಾಡಬೇಕು ಎನ್ನುವ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಕೋರ್ ಕಮಿಟಿಯಲ್ಲಿ ಈಗಾಗಲೇ ಚರ್ಚೆಯಾಗಿರುವ ಕಾರಣ ನಾಳೆ ಬಹುತೇಕ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಆಜಾನ್‌ಗೆ ಅಪಸ್ವರ.. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ, ಎಲ್ಲವೂ ಹಳೆಯದೇ : ಸಿಎಂ ಬೊಮ್ಮಾಯಿ
ಒಟ್ಟಿನಲ್ಲಿ ಕಳೆದ ಆರು ತಿಂಗಳಿನಿಂದ ಆಕಾಂಕ್ಷಿಗಳು ಬೊಮ್ಮಾಯಿ ಸಂಪುಟ ಸೇರ್ಪಡೆಗೆ ಕಾದು ಕುಳಿತಿದ್ದಾರೆ. ಈಗಲಾದರೂ ವರಿಷ್ಠರು ಆಕಾಂಕ್ಷಿಗಳಿಗೆ ಬೆಲ್ಲದ ಸವಿ ನೀಡುತ್ತಾರಾ? ಅಥವಾ ಬೇವಿನ ಕಹಿ ನೀಡುತ್ತಾರಾ? ಸಂಪುಟ ಸರ್ಕಸ್ಗೆ ತೆರೆ ಬೀಳಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.