ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಜಾರಿ, ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಪ್ರಸ್ತಾಪವಿಲ್ಲ. ಈಗ ಜನ ಜೀವನ ವ್ಯವಸ್ಥೆ ಹೇಗಿದೆಯೋ ಹಾಗೆಯೇ ನಡೆಯಬೇಕು ಎನ್ನುವುದು ಸರ್ಕಾರದ ನಿಲುವಾಗಿದೆ. ಇಂದಿನ ಸಭೆ ನಂತರ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಹೊಸ ತಳಿ ಒಮಿಕ್ರಾನ್ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ, ರಾಜ್ಯದಲ್ಲಿ ಏನು ಪರಿಣಾಮ ಆಗಲಿದೆ ಎನ್ನುವ ಕುರಿತು ನಾವು ಗಮನಿಸುತ್ತಿದ್ದೇವೆ. ಮತ್ತೊಂದು ಕಡೆ ಡೆಲ್ಟಾ ಸ್ಟ್ರೇನ್ ಕೂಡ ಅಲ್ಲಲ್ಲಿ ಕ್ಲಸ್ಟರ್ ಆಗುತ್ತಿದೆ. ಹೀಗಾಗಿ ಎರಡನ್ನೂ ನಾವು ನಿಭಾಯಿಸಬೇಕಿದೆ. ರಾಜ್ಯ ಸರ್ಕಾರದಿಂದ ವೈಜ್ಞಾನಿಕವಾಗಿ ಗಮನಿಸುವುದು ಮತ್ತು ನಿಭಾಯಿಸುವ ಕೆಲಸ ಮಾಡುತ್ತಿದ್ದೇವೆ. ಹೆಚ್ಚಿನ ತನಿಖೆಗಾಗಿ ವರದಿಗಳನ್ನು ಕಳುಹಿಸಲಾಗುತ್ತಿದೆ. ಇದರ ಜೊತೆಗೆ ವಿದೇಶದಿಂದ ಬಂದಿರುವ ಪ್ರಯಾಣಿಕರ ಬಗ್ಗೆಯೂ ವಿಶೇಷವಾದ ನಿಗಾ ಇರಿಸಲಾಗಿದೆ. ಟ್ರ್ಯಾಕಿಂಗ್, ಟ್ರೇಸಿಂಗ್ ನಡೆಯಲಿದ್ದು, ಅವರ ಸಂಪರ್ಕಕ್ಕೆ ಬಂದವರ ಟ್ರ್ಯಾಕಿಂಗ್ ಕೂಡ ಮಾಡಲಾಗುತ್ತಿದೆ ಎಂದರು.
ಕ್ಲಸ್ಟರ್ ಬಗ್ಗೆ ವಿಶೇಷವಾದ ಮಾರ್ಗಸೂಚಿ ಹೊರಡಿಸಿದ್ದೇವೆ. ಕ್ಲಸ್ಟರ್ ನಲ್ಲಿ ಇರುವವರನ್ನ ತಪಾಸಣೆಗೊಳಿಸಬೇಕು 7 ದಿನಗಳ ನಂತರ ಮತ್ತೆ ಟೆಸ್ಟ್ ಮಾಡಬೇಕು. ಅವರ ಸಂಪರ್ಕಕ್ಕೆ ಬಂದವರಿಗೂ ಟೆಸ್ಟ್ ಮಾಡಬೇಕು, ಎಸ್‌ಡಿಎಂ ಕ್ಲಸ್ಟರ್ ನಲ್ಲಿ 4 ಸಾವಿರ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಅದೇ ರೀತಿ ಮೈಸೂರು, ಹಾಸನ, ಬೆಂಗಳೂರು ಸೇರಿ ಎಲ್ಲೆಲ್ಲಿ ಕ್ಲಸ್ಟರ್ ಇವೆಯೋ ಅಲ್ಲಿ ವಿಶೇಷವಾದ ನಿಗಾ ಇರಿಸಲಾಗಿದೆ. ಒಟ್ಟಾರೆಯಾಗಿ ಪ್ರತಿದಿನದ ಕೋವಿಡ್ ಟೆಸ್ಟ್ ಹೆಚ್ಚಿಸಬೇಕು ಎಂದು ಸೂಚನೆ ಕೊಡಲಾಗಿದೆ ಎಂದು ಸಿಎಂ ತಿಳಿಸಿದರು.
Karnataka lockdown : ಆರೋಗ್ಯ ಸಚಿವರು ಇಂದು ಸಭೆ ಮಾಡಲಿದ್ದಾರೆ. ಬಹಳ ಕೂಲಂಕಶವಾಗಿ ಸಭೆ ಮಾಡಿ ಸಭೆಯ ಔಟ್ ಕಮ್ ಕುರಿತು ನನ್ನ ಜೊತೆ ಮಾತುಕತೆ ನಡೆಸಲಿದ್ದು, ನಂತರ ಮುಂದೆ ಇರುವ ಸ್ಥಿತಿಯನ್ನು ಗಮನಿಸಿ ಏನೆಲ್ಲಾ ಮಾಡಬೇಕು ಎಂದು ನಿರ್ಧಾರ ಮಾಡಲಾಗುತ್ತದೆ. ಆದರೆ ಲಾಕ್ ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಊಹಾಪೋಹದ ಕ್ರಮಗಳು ಕೂಡ ಸರ್ಕಾರದ ಮುಂದೆ ಸದ್ಯಕ್ಕಿಲ್ಲ. ಈಗ ಜನಜೀವನ ಯಾವ ರೀತಿ ನಡೆಯುತ್ತಿದೆಯೋ ಹಾಗೆಯೇ ನಡೆಯಬೇಕು. ಎಲ್ಲೆಲ್ಲಿ ಜನ ಸೇರಲಿದ್ದಾರೋ ಅಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎನ್ನುವ ಮನವಿ ಮಾಡಲಾಗುತ್ತದೆ. ಸಂಘ ಸಂಸ್ಥೆಗಳಲ್ಲಿ ಜನ ಸೇರಿಸುತ್ತಾರೆ, ಅಂತಹ ಕಡೆ ಆಯಾ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ಕೊರೊನಾ ಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಿದರು.
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ನಾವು ಅತ್ಯಂತ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಎಲ್ಲೆಲ್ಲಿ ಕ್ಲಸ್ಟರ್ಗಳು ಆಗಿದ್ದಾವೆಯೋ ಅಲ್ಲಿ ವಿಶೇಷವಾಗಿ ಪರಿಸ್ಥಿತಿ ನಿಭಾಯಿಸಿದ್ದೇವೆ. ಸರ್ಕಾರದ ಕೋವಿಡ್ ಮಾರ್ಗಸೂಚಿಗಳು ಅಧಿವೇಶನಕ್ಕೂ ಅನ್ವಯವಾಗಲಿವೆ ಎಂದು ಸಿಎಂ ಬೆಳಗಾವಿ ಅಧಿವೇಶನದ ಬಗ್ಗೆ ನಿಖರವಾಗಿ ಯಾವುದೇ ಉತ್ತರ ನೀಡಲಿಲ್ಲ.