ಹುಬ್ಬಳ್ಳಿ(ಧಾರವಾಡ): ಎಸ್ಎಸ್ಎಲ್ಸಿ ಪರೀಕ್ಷೆಗಳು ನಾಳೆಯಿಂದ ಆರಂಭವಾಗಲಿದ್ದು, ರಾಜ್ಯಾದ್ಯಂತ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಪರೀಕ್ಷೆ ಬರೆಯಿರಿ. ನಿಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಿ ಎಂದು ಧೈರ್ಯ ತುಂಬಿದರು.
ಇದೇ 30ರಂದು ಬಜೆಟ್ ಅಧಿವೇಶನ ಮುಗಿಯಲಿದೆ. ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಅಂತರರಾಜ್ಯ ಜಲ ವಿವಾದ ವಿಚಾರವಾಗಿ ಮಾತನಾಡುತ್ತಾ, ಶೀಘ್ರದಲ್ಲೇ ವಿವಾದ ಬಗೆಹರಿಯುತ್ತದೆ. ಕಾನೂನಾತ್ಮಕ ರೀತಿಯಲ್ಲಿ ನ್ಯಾಯಾಲಯಗಳಿಂದ ನಮಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೇಂದ್ರದಿಂದಲೂ ಸಹ ಹಲವು ಅನುಮತಿಗೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟವರಿಗೆ ಹೇಳಿದ್ದೇನೆ ಎಂದರು.
ಕೈಗಾರಿಕಾಭಿವೃದ್ಧಿ ನಿಟ್ಟಿನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೆ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಈಗಾಗಲೇ ಜಯದೇವ ಹೃದಯ ಸಂಸ್ಥೆ ತರುವ ನಿಟ್ಟಿನಲ್ಲಿ ಗವರ್ನಿಂಗ್ ಕೌನ್ಸ್ಲಿಂಗ್‌ನಲ್ಲಿ ಹೇಳಲಾಗಿದೆ. ಜಿಲ್ಲಾಧಿಕಾರಿಗೂ ಸಹ ಆದಷ್ಟು ಬೇಗ ಜಾಗ ಹುಡುಕಿ ಎಂದು ಹೇಳಿದ್ದಾಗಿ ಸಿಎಂ ತಿಳಿಸಿದರು.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ: ಸೈಕಲ್ ಜಾಥಾಗೆ ತೇಜಸ್ವಿ ಸೂರ್ಯ ಚಾಲನೆ
ರೈಲ್ವೆ, ಸ್ಪೋರ್ಟ್ಸ್‌ನಲ್ಲಿ ವಿಶೇಷ ಅಭಿವೃದ್ಧಿ ತರಲು ಕೂಡಾ ಚಿಂತನೆ ಮಾಡಿದ್ದೇವೆ. ಇದು ಅಭಿವೃದ್ಧಿ ಕಾಲವಾಗಿದ್ದು, ವೇಗ ಹೆಚ್ಚಲಿದೆ. ಎರಡು ವರ್ಷಗಳ ಕಾಲ ಕೋವಿಡ್ ಇದ್ದ ಕಾರಣ ಯಾವುದೇ ಅಭಿವೃದ್ಧಿ ಆಗಿರಲಿಲ್ಲ ಎಂದರು.