ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನವದೆಹಲಿ ಪ್ರವಾಸ ಮುಂದೂಡಿಕೆಯಾಗಿದೆ. ನಾಳೆ ದೆಹಲಿಗೆ ತೆರಳಲು ಸಿದ್ದರಾಗಿದ್ದ ಸಿಎಂ ಇದೀಗ ಪ್ರವಾಸದಲ್ಲಿ ಬದಲಾವಣೆ ಮಾಡಿದ್ದು, ಸೋಮವಾರ ರಾಷ್ಟ್ರ ರಾಜಧಾನಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ಗೂ ಮೊದಲು ದೆಹಲಿಯಲ್ಲಿ ಸಂಸತ್ ಸದಸ್ಯರ ಸಭೆ ಆಗಬೇಕು. ಹಾಗಾಗಿ ನಾನು ನಾಳೆ ದೆಹಲಿಗೆ ಹೋಗಲು ಯೋಚಿಸಿದ್ದೆ. ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಆದರೆ, ನಮ್ಮ ಸಂಸತ್ ಸದಸ್ಯರ ಮನವಿ ಮೇರೆಗೆ ಸೋಮವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದೇನೆ ಎಂದರು.
ನಾಳೆ ದೆಹಲಿಗೆ ತೆರಳುವುದಾಗಿ ಇಂದು ಬೆಳಗ್ಗೆಯಷ್ಟೇ ತಿಳಿಸಿದ್ದ ಸಿಎಂ ಬೊಮ್ಮಾಯಿ, ವರಿಷ್ಠರ ಭೇಟಿಗೆ ಸಮಯವನ್ನೂ ಕೇಳಿದ್ದರು. ಆದರೆ ಎರಡು ದಿನ ಸಮಯಾವಕಾಶ ಕಷ್ಟ ಎನ್ನುವ ಸಂದೇಶ ದೆಹಲಿ ನಾಯಕರಿಂದ ಬಂದ ಹಿನ್ನೆಲೆ ಪ್ರವಾಸವನ್ನು ಸಿಎಂ ಮುಂದೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ವರಿಷ್ಠರು ಲಭ್ಯವಾಗಲಿದ್ದು, ಆಗ ಸಂಪುಟ ವಿಸ್ತರಣೆ ಕುರಿತು ಸಿಎಂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ದೆಹಲಿಗೆ ಹೋಗ್ತಿದ್ದೇನೆ. ವರಿಷ್ಠರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವರ ಭೇಟಿಗೆ ಸಿಗುವ ಅವಕಾಶಕ್ಕೆ ಅನುಗುಣವಾಗಿ ದೆಹಲಿ ಭೇಟಿ ಪ್ರವಾಸದ ವೇಳಾಪಟ್ಟಿ ನಿಗದಿಯಾಗಲಿದೆ. ಇದೇ ವೇಳೆ, ಸಂಸದರ ಜೊತೆ ಸಂಸತ್ನಲ್ಲಿ ಗಮನ ಸೆಳೆಯುವ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಅಂತಾರಾಜ್ಯ ಜಲ ವಿವಾದಗಳ ಸಂಬಂಧ ರಾಜ್ಯದ ವಕೀಲರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬಹಿರಂಗವಾಗಿ ಚರ್ಚೆ ಮಾಡಲು ಹೋಗಲ್ಲ ಎಂದ ಸಿಎಂ, ಸಂಪುಟ ವಿಸ್ತರಣೆ, ಪುನಾರಚನೆ ಎಲ್ಲವನ್ನೂ ವರಿಷ್ಠರತ್ತ ಬೆರಳು ತೋರಿ, ಹಾರಿಕೆಯ ಉತ್ತರ ನೀಡಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೇಂದ್ರ ಸರ್ಕಾರದ ಬಜೆಟ್ ಆಧಾರದ ಮೇಲೆಯೇ ನಮ್ಮ ಬಜೆಟ್ ರೆಡಿಯಾಗಲಿದೆ. ರಾಜ್ಯಕ್ಕೆ ಯಾವ ಯಾವ ಹೊಸ ಯೋಜನೆಗಳು ಜಾರಿಯಾಗಿವೆ. ಆ ಯೋಜನೆಗಳಿಗೆ ಹಣ ಎಷ್ಟು ನಿಗದಿಯಾಗಿದೆ. ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಸಿಕ್ಕಿರುವ ಅನುದಾನ ಹಾಗೂ ಯೋಜನೆಗೆ ಮೀಸಲಿಟ್ಟ ಹಣದ ಮೇಲೆ ನಮ್ಮ ಬಜೆಟ್ ರೆಡಿಯಾಗುತ್ತದೆ. ಫೆಬ್ರವರಿ 7ರಿಂದ ಬಜೆಟ್ ಪೂರ್ವಭಾವಿ ಸಭೆಗಳು ಆರಂಭವಾಗಲಿವೆ. ವಿವಿಧ ಇಲಾಖೆಗಳ ಸಚಿವರು ಅಧಿಕಾರಿಗಳ ಅಭಿಪ್ರಾಯ ಪಡೆದು, ಬಜೆಟ್ ತೀರ್ಮಾನ ಮಾಡುತ್ತೇನೆ ಎಂದರು.
ಪ್ರಭು ಚವ್ಹಾಣ್ ಭೇಟಿ: ಆರ್.ಟಿ.ನಗರದಲ್ಲಿರುವ ಸಿಎಂ ನಿವಾಸಕ್ಕೆ ಸಚಿವ ಪ್ರಭು ಚವ್ಹಾಣ್ ಆಗಮಿಸಿದರು. ನಾಳೆ ಸಿಎಂ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಭೇಟಿಗೆ ಪ್ರಭು ಚವ್ಹಾಣ್ ಆಗಮಿಸಿದ್ದು, ಸಂಪುಟ ಪುನಾ ರಚನೆ ಸಾಧ್ಯತೆಯಿಂದಾಗಿ ಸಿಎಂ ಜೊತೆ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿ ಭಾಷಣ ವೀಕ್ಷಣೆ: ಇನ್ನು ಕೇಂದ್ರ ಬಜೆಟ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸ್ಕ್ರೀನ್ ಹಾಕಿ ಆನ್‍ಲೈನ್ ಮೂಲಕ ಪ್ರಸಾರ ಮಾಡಲಾಯಿತು.
ಪ್ರಧಾನಮಂತ್ರಿಗಳು ಕಾರ್ಯಕರ್ತರು ಮತ್ತು ಹಿತೈಷಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಷಣ ಕೇಳಲು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ವ್ಯವಸ್ಥೆ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆತ್ಮನಿರ್ಭರ ಅರ್ಥವ್ಯವಸ್ಥೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ, ಎನ್.ರವಿಕುಮಾರ್ ಮತ್ತು ಜಿಲ್ಲಾ ಕೇಂದ್ರದಲ್ಲಿ 150ಕ್ಕೂ ಹೆಚ್ಚು ಕಾರ್ಯಕರ್ತರು, ಸಂಸದರು, ಶಾಸಕರು, ಸಚಿವರು ಆರ್ಥಿಕ ತಜ್ಞರೂ ಭಾಗವಹಿಸಿದ್ದರು.
ಇದನ್ನೂ ಓದಿ: ಸಂಚಾರ ದಟ್ಟಣೆ ಸಮಸ್ಯೆ, ಟೋಯಿಂಗ್ ವಿಚಾರ: ಇಂದು ಸಂಜೆ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸಭೆ