ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಹಾಗೂ ನಟ ಸಂಚಾರಿ ವಿಜಯ್ ಅವರಿಗೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸದನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪದ ನಿರ್ಣಯ ಮಂಡಿಸಿದರು.
ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ವಿಷಾದ ವ್ಯಕ್ತಪಡಿಸಿ ಮಾತನಾಡಿದ ಸ್ಪೀಕರ್, ಫರ್ನಾಂಡಿಸ್ ಅವರು ಸತತ ಐದು ಬಾರಿ ಲೋಕಸಭಾ ಸದಸ್ಯರಾಗಿದ್ದರು. ನಾಲ್ಕು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ಯುವಜನ ಕ್ರೀಡೆ, ಕಾರ್ಮಿಕ, ರಸ್ತೆ ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದರು ಎಂದು ಗುಣಗಾನ ಮಾಡಿದರು.
ಚಿತ್ರನಟ ವಿಜಯ್ ಕುಮಾರ್ (ಸಂಚಾರಿ ವಿಜಯ್) ಅವರು, ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ್ದ ನಟರಾಗಿದ್ದರು. 'ನಾನು ಅವನಲ್ಲ, ಅವಳು' ಚಿತ್ರದಲ್ಲಿನ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ಅನುಷ್ಠಾನ ಮಾಡುವಲ್ಲಿ ಶ್ರಮವಹಿಸಿದ್ದರು. ಇವತ್ತಿನ ರಾಜಕಾರಣದಲ್ಲಿ ಅವರ ಅಗತ್ಯತೆ ಇತ್ತು. ಸಂಗೀತ ಆಸಕ್ತರಾಗಿದ್ದರು. ಯಕ್ಷಗಾನದ ಜೊತೆಗೆ ಮೌತ್ ಆರ್ಗನ್ ಅವರು ತುಂಬ ಇಷ್ಟ ಪಡುತ್ತಿದ್ದರು. ಜೊತೆಗೆ, ಅವರು ಸ್ವತಃ ನುಡಿಸುತ್ತಿದ್ದರು ಎಂದು ಹೇಳಿದರು.
ಮಾತಿನ ವೇಳೆ ಸಿಎಂ ಗರಂ
ಸಂತಾಪ ನಿರ್ಣಯದ ಮೇಲೆ ಸಿಎಂ ಮಾತನಾಡುತ್ತಿದ್ದ ವೇಳೆ ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ಅಡ್ಡ ನಿಂತರು. ಈ ವೇಳೆ ಕೋಪಗೊಂಡ ಸಿಎಂ, ಸ್ವಲ್ಪ ಸರಿಯಪ್ಪಾ ಎಂದರಲ್ಲದೆ, ಯಾರಾದರೂ ಮಾತನಾಡುವಾಗ ಅಡ್ಡ ನಿಲ್ಲುವ ಪ್ರವೃತ್ತಿ ಬಿಡಿ ಎಂದರು.
ನಂತರ ಮಾತು ಮುಂದುವರಿಸಿ, ನಟ ವಿಜಯಕುಮಾರ್ ಅವರಿಗೆ ಸಂತಾಪ ಸೂಚಿಸಿದರು. ಸಂಚಾರಿ ಥಿಯೇಟರ್ ತಂಡದ ನಾಟಕಗಳಲ್ಲಿ ಅಭಿನಯಿಸಿದ್ದರಿಂದ ಸಂಚಾರಿ ವಿಜಯ್ ಎಂದೇ ಚಿರಪರಿಚಿತರಾಗಿದ್ದರು. ಅವರ ದಿಢೀರ್ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಎಂದು ಬಣ್ಣಿಸಿದರು. ಸಂತಾಪ ನಿರ್ಣಯದ ಮೇಲೆ ಮಾಜಿ ಸಚಿವ ಎಚ್.ಕೆ.ಪಾಟೀಲ್, ಬಂಡೆಪ್ಪ ಕಾಶೆಂಪೂರ್, ಕೆ.ಜೆ.ಜಾರ್ಜ್, ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರು ಮಾತನಾಡಿದರು.