ಬೆಂಗಳೂರು: ಬಜೆಟ್ ಮೇಲಿನ ಸರ್ಕಾರದ ಉತ್ತರಕ್ಕೆ ಸ್ಪಷ್ಟೀಕರಣ ಕೇಳಿ ಉತ್ತರ ಪಡೆಯುವ ಮೊದಲೇ ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ ನಡೆಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆದರು. ಕಾಂಗ್ರೆಸ್ಸಿಗರಿಗೆ ರಾಜ್ಯದ ಪ್ರಗತಿ ಬಗ್ಗೆ ಚಿಂತನೆ ಇದೆಯಾ?, ಬಜೆಟ್ ತಿರುಳು ಇವರಿಗೆ ಅರ್ಥ ಆಗಿದೆಯಾ?, ವಿರೋಧಕ್ಕೋಸ್ಕರ ವಿರೋಧ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ನಾಯಕ ಹರಿಪ್ರಸಾದ್ ಎಕನಾಮಿಕ್ ಸರ್ವೇ ಬಗ್ಗೆ ಮಾತನಾಡಿದ್ದಾರೆ. ಬೆಳೆ ಬೆಳೆದರೂ ರೈತರು ಸಂಕಷ್ಟದಿಂದ ದೂರವಾಗಿಲ್ಲ. ಹೀಗಾಗಿ 33 ಲಕ್ಷ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ರೈತ ವಿದ್ಯಾನಿಧಿ ಸ್ಥಾಪಿಸಿದ್ದು, ಕೆಪ್ಯಾಕ್ ಅನ್ನು ಬಲಪಡಿಸಿ ಉತ್ಪನ್ನಗಳ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. 10 ಕೃಷಿ ವಲಯ ಇವೆ. ಕೃಷಿ ವಿಸ್ತರಣೆ, ಕೃಷಿ ಸಬಲೀಕರಣ, ರೈತರ ಸಬಲೀಕರಣ ಮಾಡುತ್ತಿದ್ದೇವೆ.
ಕೋಲ್ಡ್ ಸ್ಟೋರೇಜ್ ಮಾಡುತ್ತಿದ್ದೇವೆ. ಪೀಣ್ಯದಲ್ಲಿ ಹೊಸ ಎಂಎಸ್ಎಂಇಗೆ ಡೆವೆಲಪ್ಮೆಂಟ್ ಪಾರ್ಕ್ ಮಾಡಲಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿಯೂ ಎಂಎಸ್ಎಂಇ ಡೆವಲಪ್ಮೆಂಟ್ ಮಾಡಲಿದ್ದೇವೆ. ಜವಳಿ ಮೆಗಾ ಪಾರ್ಕ್, ಜ್ಯುವೆಲ್ಲರಿ ಪಾರ್ಕ್ ಮಾಡಲಾಗುತ್ತಿದೆ. ಕ್ಲಸ್ಟರ್ ಅಭಿವೃದ್ಧಿ ಮಾಡುತ್ತಿದ್ದೇವೆ. ಎಂಎಸ್ಎಂಇಗೆ ಏನು ಬೇಕೋ ಅದನ್ನು ಮಾಡಲಿದ್ದೇವೆ ಎಂದರು.
ಸರ್ಕಾರಿ ಆಸ್ತಿ ಮಾರಾಟ ಮಾಡಲ್ಲ: ಕರ್ನಾಟಕ ರಾಜ್ಯದ ಯಾವುದೇ ಆಸ್ತಿ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಕೆಎಸ್ಆರ್ಟಿಸಿ, ಹೆಸ್ಕಾಂ ಕಷ್ಟದಲ್ಲಿವೆ. ಹಾಗಾಗಿ ಅವುಗಳನ್ನು ಸುಧಾರಣೆಗೆ ತರುವ ದೃಷ್ಟಿಯಿಂದ ಮಾನಿಟೈಸೇಷನ್ ಮಾತ್ರ ಮಾಡುತ್ತೇವೆಯೇ ಹೊರತು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸಭಾತ್ಯಾಗ: ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಬಜೆಟ್ ಖಂಡಿಸಿ ಸಭಾತ್ಯಾಗ ಮಾಡುವ ಘೋಷಣೆ ಮಾಡಿ ಸದಸ್ಯರ ಜತೆ ಹೊರನಡೆದರು.ಈ ವೇಳೆ ಸ್ಪಷ್ಟೀಕರಣ ಕೇಳಿ ಉತ್ತರ ಆಲಿಸದೇ ಸಭಾತ್ಯಾಗ ಮಾಡುತ್ತಿದ್ದಾರೆ. ಸಭಾತ್ಯಾಗ ಮಾಡುವುದಾದರೆ ಯಾಕೆ ಇಷ್ಟೊತ್ತು ಕಾಯಬೇಕಿತ್ತು ಎಂದು ಬಿಜೆಪಿ ಸದಸ್ಯರು ಕಾಲೆಳೆದರು.
ನಂತರ ಮಾತನಾಡಿದ ಸಿಎಂ, ಹಲವರು ಸ್ಪಷ್ಟೀಕರಣ ಕೇಳಿದ್ದಾರೆ ಅದನ್ನು ಹೇಳುತ್ತಿದ್ದೇನೆ. ಉತ್ತರ ಹೇಳುವ ಮೊದಲೇ ಎದ್ದು ಹೋಗುತ್ತಿದ್ದಾರೆ. ವಿರೋಧಕ್ಕೋಸ್ಕರ ವಿರೋಧ ಮಾಡುವುದಾದರೆ ಏನು? ಹಿಂದಿನ ಬಜೆಟ್ ಯೋಜನೆಗಳು ಆಗಿಲ್ಲ ಎನ್ನುತ್ತಿದ್ದಾರೆ. ಆದರೆ ನಾವು 352 ಯೋಜನೆ ಘೋಷಿಸಿದ್ದು, ಅದರಲ್ಲಿ 250 ಯೋಜನೆ ಪೂರ್ಣಗೊಂಡಿವೆ. 80 ಯೋಜನೆ ಅನುಷ್ಠಾನ ಹಂತದಲ್ಲಿವೆ. 4 ಯೋಜನೆ ಕೈಬಿಡಲಾಗಿದೆ. ಇದನ್ನು ಹೇಳಿದರೆ ಕೇಳಲು ಸಿದ್ದರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜನಪರ ಬಜೆಟ್: ಅಂಕಿ ಅಂಶಗಳನ್ನು ಈ ಪುಣ್ಯಾತ್ಮರು ಎಲ್ಲಿಂದ ತಂದಿದ್ದಾರೋ ಗೊತ್ತಿಲ್ಲ. 1,40,000 ಕೋಟಿ ಹಣವನ್ನು ಕೋವಿಡ್ ಇಲ್ಲದಾಗ ಸಾಲ ಪಡೆದಿದ್ದಾರೆ. ಇವರಿಂದ ಆರ್ಥಿಕತೆ ಪಾಠ ಕಲಿಯಬೇಕಾ? ಸ್ವಾತಂತ್ರ್ಯ ಬಂದ ಇಷ್ಟು ವರ್ಷದ ಸಾಲ ಐದೇ ವರ್ಷದಲ್ಲಿ ಇವರು ಮಾಡಿದ್ದಾರೆ. ಇವರು ಮಾಡಿರುವ ಸಾಲ ಇಂದು ನಾವು ತೀರಿಸುತ್ತಿದ್ದೇವೆ. ಸಾಲದ ಮಿತಿ ಕಡಿಮೆ ಮಾಡಿದ್ದೇವೆ. ಯೋಜನೆಗಳನ್ನು ಬಿಟ್ಟಿಲ್ಲ, ಎಲ್ಲಾ ಜನರ ಕಲ್ಯಾಣ ಮಾಡುವ ಬಜೆಟ್, ಜನಪರ ಬಜೆಟ್ ಇದಾಗಿದೆ. ಜನರ ಬದುಕಿನ ಭರವಸೆಯ ಬಜೆಟ್ ಇದಾಗಿದೆ ಎಂದರು.
ನಮ್ಮ ಸದಸ್ಯ ರವಿಕುಮಾರ್ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಹೇಗೆ ಎಂದು ಪ್ರಶ್ನಿಸಿದ್ದಾರೆ. ರವಿಕುಮಾರ್ ಯಾವುದೇ ಸಂಶಯ ಇರಿಸಿಕೊಳ್ಳಬೇಡಿ. ಅನುಷ್ಠಾನಕ್ಕೆ ಬೇಕಾದ ತಾಕತ್ತು ನೋಡಿಯೇ ಯೋಜನೆ ಘೋಷಣೆ ಮಾಡಿದ್ದೇನೆ. ಎಲ್ಲಾ ಇಲಾಖೆಗೆ ಈಗಾಗಲೇ ಪತ್ರ ಬರೆದಿದ್ದೇನೆ. ಏಪ್ರಿಲ್ ಕಡೆಯ ವಾರ ಎಲ್ಲ ಆದೇಶ ಆಗಲಿವೆ. ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದರು.
ರೈತರಿಗೆ ಕೆಲವೆಡೆ ಸಾಲ ನವೀಕರಣ ಆಗದೆ ಸಮಸ್ಯೆ ಆಗಿದೆ. ಸಾಲದ ಅವಧಿ ಮುಗಿದಿದೆ. ಆದರೂ ಸಹಾನುಭೂತಿಯಿಂದ ಅನುಕೂಲ ಮಾಡಿಕೊಡಲಿದ್ದೇವೆ. ಸರ್ಕಾರಿ ನೌರರಿಗೆ ಕೇಂದ್ರ ನೌಕರರ ಮಾದರಿ ವೇತನ ಹೆಚ್ಚಳ ಮಾಡುವ ಕುರಿದು ಆಯೋಗ ರಚಿಸಲಾಗಿದೆ ಆಯೋಗ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಪಿಂಚಣಿ ಕುರಿತು ಬೇರೆ ರಾಜ್ಯದ ಪರಿಸ್ಥಿತಿ ನೋಡಿ ಕ್ರಮ ವಹಿಸುತ್ತೇವೆ.
ಪಿಂಚಣಿ ಹಣ ನಿವೃತ್ತಿಯಾದಗ ಕೊಡುವುದು. ಅಲ್ಲಿಯವರೆಗೆ ಹಣ ಸರ್ಕಾರದಲ್ಲೇ ಇರಲಿದೆ. ಅದನ್ನು ಬಳಸಿಕೊಳ್ಳುವ ಕುರಿತು ಸದಸ್ಯ ಶ್ರೀಕಂಠೇಗೌಡ ಉತ್ತಮ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತದೆ. ಹಣಕಾಸು ಇತಿಮಿತಿ ನೋಡಿ ಇತರ ಭರವಸೆಗಳನ್ನು ಈಡೇರಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇದನ್ನೂ ಓದಿ: ಘೋಷಿತ ಕಾರ್ಯಕ್ರಮಗಳಿಗೆ ಅನುದಾನ ಕೊಟ್ಟು ಅನುಷ್ಠಾನಕ್ಕೆ ತರಲು ಬದ್ಧ: ಸಿಎಂ ಬೊಮ್ಮಾಯಿ