ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾದ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯ ನಂತರ ಉನ್ನತ ಮಟ್ಟದ ತನಿಖೆಗೆ ವಹಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ, ಈಗಾಗಲೇ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಪೊಲೀಸರಿಗೆ ಬಿಟ್ಟಿದ್ದಾಗಿದೆ. ಕಾನೂನು ಪ್ರಕಾರ, ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಾಥಮಿಕ ತನಿಖೆ ನಂತರ ಉನ್ನತ ಮಟ್ಟದ ತನಿಖೆ ಕುರಿತು ನಿರ್ಧರಿಸಲಾಗುತ್ತದೆ ಎಂದರು.
ಮಾಧ್ಯಮದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ನವದೆಹಲಿಗೆ ತೆರಳುತ್ತಿದ್ದೇನೆ. ಇದೇ ವೇಳೆ ಜಲಶಕ್ತಿ ಸಚಿವರನ್ನು ಮತ್ತು ಆರೋಗ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದುಕೊಂಡಿದ್ದು, ಇಂದು ಸಂಜೆಯೇ ನವ ದೆಹಲಿಯಿದಿಂದ ವಾಪಸ್ ಆಗಲಿದ್ದೇನೆ ಎಂದು ತಿಳಿಸಿದರು.
ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಮನವಿ:
ಸಿಎಂ ದೆಹಲಿಗೆ ತೆರಳುವ ಮುನ್ನ ಆರ್.ಟಿ ನಗರ ನಿವಾಸಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗೆ ಅವರು ಮನವಿ ಮಾಡಿದರು.
ಈಗಾಗಲೇ ದೂರು ದಾಖಲಿಸಿರುವ ಎಸ್.ಆರ್ ವಿಶ್ವನಾಥ್ ಇದೀಗ ಸಿಎಂ ಭೇಟಿ ಮಾಡಿ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು. ಕಳೆದ ರಾತ್ರಿ ಮಾತುಕತೆ ಅಪೂರ್ಣಗೊಂಡಿದ್ದು, ಸಿಎಂ ನಿರ್ದೇಶನದಂತೆ ಇಂದು ಬೆಳಗ್ಗೆ ಆಗಮಿಸಿ ವಿಸ್ತೃತವಾದ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣ: ಸಿಸಿಬಿ, ಸಿಐಡಿಗೆ ವಹಿಸೋ ಬಗ್ಗೆ ಇಂದು ನಿರ್ಧಾರ