ನವದೆಹಲಿ/ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಸ್ತಾಗಲಿ, ನಿವೃತ್ತಿಯಾಗಲಿ ಇಲ್ಲ. ಮುಂದಿನ ಚುನಾವಣೆಯಲ್ಲಿ ಅವರ ಬಲ, ಮಾರ್ಗದರ್ಶನ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಮೊನ್ನೆ ಅವರ ಭೇಟಿ ವೇಳೆ ಇಂತಹ ಯಾವುದೇ ಮಾತುಕತೆ ಆಗಿರಲಿಲ್ಲ. ರಾಜ್ಯಕ್ಕೆ ವಾಪಸ್ ಆದ ಬಳಿಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಬಿಎಸ್‌ವೈ ಅವರು ನಿರಂತರ ಹೋರಾಟಗಾರರು. ಅವರು ಭಾರತೀಯ ಜನತಾ ಪಾರ್ಟಿಯೊಂದಿಗೆ ಸದಾ ಇರುತ್ತಾರೆ ಎಂದರು.
ಯಡಿಯೂರಪ್ಪ ಅವರಿಗೆ ತಮ್ಮದೇ ಆದ ಮಹತ್ವವಿದೆ. ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದರು.
ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಈ ಬಾರಿಯ ಭೇಟಿ ರಾಷ್ಟ್ರಪತಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಸೀಮಿತವಾಗಿದೆ. ಯಾವುದೇ ಹೊಸ ಅಜೆಂಡಾ ಇಲ್ಲ. ಜು.25 ರಂದು ದ್ರೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಆ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ. ಆಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಬಿಎಸ್‌ವೈ ಸಲಹೆ ಅತ್ಯಗತ್ಯ: ಮುರುಗೇಶ್ ನಿರಾಣಿ