ಬೆಂಗಳೂರು: ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಇಲ್ಲದ ಕಾರಣ ಸಚಿವ ಸಂಪುಟ ವಿಸ್ತರಣೆ ಕುರಿತು ಈ ಬಾರಿ ಯಾವುದೇ ಚರ್ಚೆ ನಡೆಸುತ್ತಿಲ್ಲ. ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೆಂಗಳೂರಿಗೆ ವಾಪಸ್ ಆಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಜೊತೆ ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಚರ್ಚೆ ಮಾಡುವುದಿತ್ತು. ಆದರೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿಲ್ಲ. ಹೀಗಾಗಿ ಪೂರ್ವನಿಗದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ದೇನೆ. ನಾಳೆ ಸಚಿವ ಸಂಪುಟ ಸಭೆ ಇದೆ. ಹಾಗಾಗಿ ಇಲ್ಲಿ ಕಾಯದೆ ರಾಜ್ಯಕ್ಕೆ ಹೋಗುತ್ತಿದ್ದೇನೆ ಎಂದರು.
ಸಚಿವ ಅಶ್ವತ್ಥ್ ನಾರಾಯಣ್ ಅವರು ಕಾಂಗ್ರೆಸ್ನ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಹಜವಾಗಿ ಒಬ್ಬರಿಗೊಬ್ಬರು ಭೇಟಿಯಾಗುತ್ತಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಆದರೆ, ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಎಂಬಿ ಪಾಟೀಲ್ ಬಳಿಗೆ ಅಶ್ವತ್ಥ ನಾರಾಯಣ ಹೋಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ. ನಾನು ಬೆಂಗಳೂರಿಗೆ ಹೋದ ನಂತರ ಅಶ್ವತ್ಥ ನಾರಾಯಣ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.
ಇಂದು ಸಂಜೆ ವಿವಿಧ ದೇಶಗಳ ರಾಯಭಾರಿಗಳ ಜೊತೆ ಮಾತುಕತೆ ನಡೆಸಲಿದ್ದೇನೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಆಹ್ವಾನ ಮಾಡುವ ಕುರಿತು ಸಭೆ ಇದೆ. ಕೈಗಾರಿಕಾ ಇಲಾಖೆಯಿಂದ ಈ ಸಭೆ ಆಯೋಜನೆ ಮಾಡಲಾಗಿದೆ. ಸಚಿವ ನಿರಾಣಿ ಅವರ ಒತ್ತಾಸೆಯಂತೆ ನಾನು ದೆಹಲಿಗೆ ಬಂದಿದ್ದೇನೆ. ಇದನ್ನು ಮುಗಿಸಿಕೊಂಡು ನಾಳೆ ವಾಪಸ್ ಹೋಗುತ್ತೇನೆ ಎಂದರು.
ಓದಿ: ಶಿಕ್ಷಕರ ನೇಮಕ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ: ಸಚಿವರ ಸ್ಪಷ್ಟನೆ