ಬೆಂಗಳೂರು: ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ. ರಾಜ್ಯದಲ್ಲಿ ಒಂದು ವಾರದ ಪರಿಸ್ಥಿತಿ ಅವಲೋಕಿಸಿದ ಬಳಿಕ ಕೋವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಹಾಸ್ಟೆಲ್, ಕ್ಲಸ್ಟರ್ಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಉಳಿದಂತೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ ಎಂದರು.
ಇಂದು ಸಂಪುಟದ ಸಹೋದ್ಯೋಗಿಗಳು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ಸೇರಿದಂತೆ ಇತರ ತಜ್ಞರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಒಂದು ವಾರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಹೊಸ ಮಾದರಿಯ ಒಮಿಕ್ರಾನ್ ಸೋಂಕು ಕಾಣಿಸಿಕೊಂಡರೂ ಗಾಬರಿಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಆದರೂ ಕೆಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸರ್ಕಾರ ಅದನ್ನು ಪರಿಸ್ಥಿತಿಗೆ ತಕ್ಕಂತೆ ಅನುಷ್ಠಾನ ಮಾಡಲಿದೆ ಎಂದರು.
ಶಾಲೆಗಳಲ್ಲಿ ನಿಗಾ:
ವಿದ್ಯಾರ್ಥಿ ನಿಲಯಗಳು, ನವೋದಯ ಶಾಲೆಗಳು, ಶಾಲಾ ಕಾಲೇಜುಗಳಲ್ಲಿ ಹೆಚ್ಚು ನಿಗಾ ವಹಿಸಲು ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಯಾವ, ಯಾವ ಸಲಹೆಗಳನ್ನು ನೀಡಿದ್ದಾರೋ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಸದ್ಯಕ್ಕೆ ರಾಜ್ಯದಲ್ಲಿ ಕರ್ಫ್ಯೂ ವಿಸ್ತರಿಸುವುದು, ನಿಬಂಧನೆ ಹಾಕುವ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿ ನಿಲಯಗಳಿಗೆ ಬರುವವರಿಗೆ ಎರಡು ಬಾರಿ ಸ್ಯಾನಿಟೈಸ್ ಮಾಡಿಸುವುದು, ಅನಗತ್ಯವಾಗಿ ಇಲ್ಲಿ ಬಂದು ಹೋಗುವವರಿಗೆ ಕಡಿವಾಣ ಹಾಕುವುದು, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ, ಅಡುಗೆ ತಯಾರಿಸುವರಿಗೆ ಕಡ್ಡಾಯವಾಗಿ 2 ಹಂತದ ಲಸಿಕೆಯನ್ನು ನೀಡುವುದು, ಜೊತೆಗೆ ಐಸೋಲೇಷನ್ ರೂಮ್ ಮಾಡುವುದಕ್ಕೂ ಸೂಚಿಸಿದ್ದಾರೆ. ಇವೆಲ್ಲವನ್ನು ನಾವು ಪಾಲನೆ ಮಾಡುತ್ತೇವೆ ಎಂದು ಹೇಳಿದರು.
ಕೆಲವು ಶಾಲಾ-ಕಾಲೇಜ್ಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಕ್ಲಸ್ಟರ್ ಮ್ಯಾನೇಜನ್ಮೆಂಟ್ ಮತ್ತು ವಾಕ್ಸಿನೇಷನ್ ಡ್ರೈವ್ ಮಾಡಬೇಕೆಂದು ತಜ್ಞರು, ಸಚಿವರು ಸಲಹೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಗಡಿಯಲ್ಲಿ ಇನ್ನಷ್ಟು ಬಿಗಿ:
ಗಡಿಭಾಗದ ಜಿಲ್ಲೆಗಳಲ್ಲಿ ಈಗಿರುವ ನಿಯಮಗಳ ಜೊತೆಗೆ ಇನ್ನಷ್ಟು ನಿಯಮಗಳನ್ನು ಜಾರಿ ಮಾಡುತ್ತೇವೆ. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಯಾವೆಲ್ಲ ನಿಯಮಗಳನ್ನು ಜಾರಿ ಮಾಡಿದ್ದೇವೋ ಅದು ಮುಂದುವರೆಯಲಿದೆ. ಕರ್ನಾಟಕಕ್ಕೆ ಆಗಮಿಸುವವರಿಗೆ ಹಿಂದೆ ಮಾಡಿದ ನಿಯಮಗಳು ಅನ್ವಯವಾಗಲಿದೆ ಎಂದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಣೆಗೆ ಯಾವೆಲ್ಲ ನಿಯಮಗಳನ್ನು ಜಾರಿ ಮಾಡಬೇಕು ಎಂಬುದರ ಬಗ್ಗೆ ಸಚಿವರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅಂತಿಮವಾಗಿ ತಜ್ಞರು ನೀಡುವ ಸಲಹೆಗಳು ಮತ್ತು ಶಿಫಾರಸ್ಸಿನ ಮೇಲೆ ಸರ್ಕಾರ ಮುಂದುವರೆಯಲಿದೆ. ಕೋವಿಡ್ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನೂ ತೆಗೆದುಕೊಳ್ಳುತ್ತೇವೆ. ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು ಎಂದು ಸಿಎಂ ಮನವಿ ಮಾಡಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಭೆಗೆ ಬರಲು ಸಾಧ್ಯವಾಗುತ್ತಿಲ್ಲವೆಂದು ಅನುಮತಿ ಪಡೆದಿದ್ದಾರೆಂದು ಹೇಳಿದರು.